ಕೆಎಸ್‌ಸಿಎ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ ಚಲಾಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರುವ ಭರವಸೆ ನೀಡಿದ್ದಾರೆ. 2026ರ ಐಪಿಎಲ್ ಪಂದ್ಯಗಳನ್ನೂ ಇಲ್ಲಿಯೇ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಡಿ.07): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಡಳಿತ ಮಂಡಳಿ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು, ಸಂಸ್ಥೆಗೆ ಹೊಸ ಹುರುಪು ತುಂಬುವ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಿ ತರುವ ಭರವಸೆ ನೀಡಿದ್ದಾರೆ.

ಮತದಾನ ಪ್ರಕ್ರಿಯೆ ಮುಗಿಸಿ ನಗುಮೊಗದಲ್ಲಿ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕೆಎಸ್‌ಸಿಎ ಚುನಾವಣಾ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳೂ ತಮ್ಮ ಆಪ್ತರೇ ಎಂದು ಹೇಳುವ ಮೂಲಕ ರಾಜಕೀಯ ತಾಟಸ್ಥ್ಯವನ್ನು ಕಾಯ್ದುಕೊಂಡರು. ಈ ಚುನಾವಣೆಯಲ್ಲಿ ನಿಂತಿರುವ ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ .., ಹೀಗೆ ಎಲ್ಲರೂ ನನಗೆ ಬೇಕಾದವರೇ. ನಾನು ಚಿಕ್ಕವನಿರುವಾಗಲೇ ಕೆಎಸ್‌ಸಿಎಯಲ್ಲಿ ನನಗೆ ಸದಸ್ಯತ್ವ ನೀಡಲಾಗಿತ್ತು' ಎಂದು ಸ್ಮರಿಸಿದರು. ಯಾರೇ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಆಶಯ ತಮಗಿದೆ ಎಂದು ತಿಳಿಸಿದರು.

ಚಿನ್ನಸ್ವಾಮಿಗೆ ಮರಳಿ ಬರಲಿವೆ ಅಂತಾರಾಷ್ಟ್ರೀಯ ಪಂದ್ಯಗಳು

ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕ್ರಿಕೆಟ್ ಪ್ರೇಮಿಗಳಿಗೆ ಪ್ರಮುಖ ಭರವಸೆ ನೀಡಿದರು. 'ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆ ಮೈದಾನಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದು ಹೋಗುತ್ತಿರುವ ಅಂತರಾಷ್ಟ್ರೀಯ ಪಂದ್ಯಗಳನ್ನು ನಾವು ವಾಪಸ್ ತರುತ್ತೇವೆ. ಬೆಂಗಳೂರು ಯಾವಾಗಲೂ ಪ್ರಮುಖ ಕ್ರಿಕೆಟ್ ಹಬ್ ಆಗಿ ಉಳಿಯಬೇಕು ಎಂದು ಹೇಳಿದರು.

ಅಲ್ಲದೆ, ಮುಂದಿನ ಆವೃತ್ತಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಬಗ್ಗೆಯೂ ಅವರು ಮಹತ್ವದ ಮಾಹಿತಿ ನೀಡಿದರು. '2026ರ ಐಪಿಎಲ್ ಪಂದ್ಯಗಳು ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯುತ್ತವೆ. ಐಪಿಎಲ್‌ನಂತಹ ಬೃಹತ್ ಟೂರ್ನಿಗಳನ್ನು ಬೆಂಗಳೂರು ಕಳೆದುಕೊಳ್ಳದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಒಟ್ಟಾರೆ ಉಪ ಮುಖ್ಯಮಂತ್ರಿಗಳ ಈ ಹೇಳಿಕೆ, ಆಡಳಿತ ಮತ್ತು ಕ್ರಿಕೆಟ್ ಮಂಡಳಿಗಳ ನಡುವೆ ಉತ್ತಮ ಸಮನ್ವಯದ ಸಾಧ್ಯತೆಯನ್ನು ತೋರಿಸುತ್ತದೆ. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೆಎಸ್‌ಸಿಎ ಮತ್ತೆ ಕ್ರಿಕೆಟ್ ಚಟುವಟಿಕೆಗಳ ಕೇಂದ್ರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.