1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ ಮಾಡಿದ್ದಾರೆ. ಮಕ್ಕಳು ವಯಸ್ಸ 6 ವರ್ಷ ಕಡ್ಡಾಯ ಮಾಡಿರುವುದು ಇಂಗ್ಲೀಷ್ ಶಾಲೆಗಳ ಪೋಷಕರಲ್ಲಿ ಆತಂಕ ತರಿಸಿದೆ.
ಬೆಂಗಳೂರು (ಡಿ.07) ಕರ್ನಾಟಕದಲ್ಲಿ ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಅಂಕ ಕಡಿತ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರ ಬೆನ್ನಲ್ಲೇ ಮಕ್ಕಳ ಶಿಕ್ಷಣ ಹಾಗೂ ದಾಖಲಾತಿಯಲ್ಲಿ ಮಾಡಿರುವ ಬದಲಾವಣೆ ಕೆಲ ಪೋಷಕರಲ್ಲಿ ಆತಂಕ ತರಿಸಿದೆ. ಪ್ರಮುಖಾಗಿ 1ನೇ ತರಗತಿಗೆ ದಾಖಲಾತಿ ಮಾಡಲು ಮಗುವಿಗೆ ಕನಿಷ್ಠ 6 ವರ್ಷ ತುಂಬಿರಬೇಕು. ದಾಖಲಾತಿ ವೇಳೆಗೆ 6 ವರ್ಷ ತುಂಬಿದ್ದರೆ ಮಾತ್ರ 1ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯ ಎಂಬ ನಿಯಮ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಈ ನಿರ್ಧಾರ ಇಂಗ್ಲೀಷ್ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕ ತರಿಸಿದೆ. ಹೀಗಾಗಿ ಈ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾದ ಪೋಷಕರು
ಇಂಗ್ಲೀಷ್ ಶಾಲಾ ಮಕ್ಕಳ ಪೋಷಕರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಪ್ರಮುಖವಾಗಿ ಕನಿಷ್ಠ ವಯಸ್ಸು ನಿಯಮದಲ್ಲಿ ಸಡಿಲಿಕೆ ಮಾಡಲು ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ. ಈ ನಿಯಮದಿಂದ ಹಲವು ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ. ಇದರಿಂದ ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ಸಾಧ್ಯವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗಲಿದೆ ಅನ್ನೋ ಮನವಿ ಮಾಡಿದ್ದಾರೆ.
ದಾಖಲಾತಿ ನಿಯಮ ಮತ್ತಷ್ಟು ಬಿಗಿ
ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣ ವಿಚಾರದಲ್ಲಿ ಕೆಲ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಪೈಕಿ ದಾಖಲಾತಿ ಕೂಡ ಸೇರಿದೆ. ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣದ ಹೊರೆ ಹೊರಿಸಲಾಗುತ್ತಿದೆ ಅನ್ನೋ ಆರೋಪ ಹಲವು ದಶಕಗಳಿಂದ ಕೇಳಿಬರುತ್ತಿದೆ. ಆಟವಾಡಬೇಕಿರುವ ಮಕ್ಕಳು 2 ವರ್ಷಕ್ಕೆ ಮಾಂಟೆಸರಿ, ಪ್ರೀ ಕೆಜಿ ಸೇರಿದಂತೆ ಹಲವು ರೀತಿಯಲ್ಲಿ ಶಿಕ್ಷಣ ಜವಾಬ್ದಾರಿ ಹೊರಿಸಲಾಗುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಆಟವಾಡಿ ಬೆಳೆಯಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ 1ನೇ ತರಗತಿಗೆ 6 ವರ್ಷ ಕಡ್ಡಾಯ ನಿಯಮ ಸರಿಯಾಗಿದೆ ಎಂಬುದು ಹಲವರ ಅಭಿಪ್ರಾಯ.
ಹಲವು ಶಾಲೆಗಳು 6 ವರ್ಷ ತುಂಬಿಲ್ಲದಿದ್ದರೂ ಮಕ್ಕಳನ್ನು 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳುತ್ತದೆ. ಪೋಷಕರಿಗೆ ಪ್ರಮಾಣ ಪತ್ರಗಳನ್ನು ಪಡೆದು, ಸಹಿ ಪಡೆದು ಈ ರೀತಿ ದಾಖಲು ಮಾಡಿಕೊಳ್ಳುತ್ತದೆ. ಇದರಿಂದ ಮಕ್ಕಳ ಮೇಲೆ ಹೆಚ್ಚಿನ ಹೊರೆ ಬೀಳುವುದು ಮಾತ್ರವಲ್ಲ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ವಯಸ್ಸಿನ ಕಾರಣದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ ಅನ್ನೋ ಆರೋಪಗಳು ಕೇಳಿಬರುತ್ತಲೇ ಇದೆ. ಇದಕ್ಕೆ 6 ವರ್ಷ ತುಂಬಿರಬೇಕು ಅನ್ನೋ ನಿಯಮ ಉತ್ತರವಾಗಿದೆ.


