- Home
- News
- State
- ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ನಾಯಕರಿಂದ ಸುವರ್ಣ ಸೌಧ ಮುತ್ತಿಗೆ ಯತ್ನ
ಬೆಳಗಾವಿ (ಡಿ.09): ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಳಗಾವಿಯ ಮಾಲಿನಿ ಸಿಟಿ ಬಳಿ ಬೃಹತ್ ಸಮಾವೇಶ ನಡೆಸಿದ ಬಿಜೆಪಿ ನಾಯಕರು, ಬಳಿಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ನಡೆಸಿದರು. ಆದರೆ, ಪೊಲೀಸರು ಅತ್ಯಂತ ಬಿಗಿ ಭದ್ರತೆ ಕೈಗೊಂಡು, ಮುತ್ತಿಗೆ ಯತ್ನ ವಿಫಲಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ನೂರಾರು ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಸುವರ್ಣ ಸೌಧಕ್ಕೆ ಹೋಗುವ ಮೊದಲೇ ತಡೆ
ಸಮಾವೇಶ ಮುಗಿದ ನಂತರ ಮಾಲಿನಿ ಸಿಟಿಯಿಂದ ಹೆದ್ದಾರಿ ಮೂಲಕ ಸುವರ್ಣಸೌಧದತ್ತ ಹೊರಟ ಕಮಲ ನಾಯಕರನ್ನು ಹೆದ್ದಾರಿ ತಲುಪುವ ಮೊದಲೇ ಸರ್ವಿಸ್ ರಸ್ತೆಯ ಮೇಲೆಯೇ ಪೊಲೀಸರು ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಪೊಲೀಸರ ಪ್ರಯತ್ನದ ವೇಳೆ ಕೆಲಹೊತ್ತು ಹೈಡ್ರಾಮಾ ಸೃಷ್ಟಿಯಾಗಿ, ಪೊಲೀಸರು ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು.
50ಕ್ಕೂ ಅಧಿಕರ ಪ್ರತಿಭಟನಾಕಾರರ ವಶ
ಅಂತಿಮವಾಗಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಆರ್. ಅಶೋಕ, ಶಾಸಕರಾದ ಚಲುವಾದಿ, ರವಿಕುಮಾರ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ ಸೇರಿ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದು ಲಜ್ಜೆಗೆಟ್ಟ ರೈತ ವಿರೋಧಿ ಸರ್ಕಾರ - ವಿಜಯೇಂದ್ರ ವಾಗ್ದಾಳಿ
ಸುವರ್ಣ ಸೌಧ ಮುತ್ತಿಗೆ ಹಾಕುವ ಮುನ್ನ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತರ ಪರವಾಗಿ ಪ್ರತಿಭಟನೆ ನಡೆಸಿದ್ದೇವೆ. ಇಂದು ದಾವಣಗೆರೆಯಲ್ಲಿ ಹೋರಾಟಕ್ಕೆ ಚಾಲನೆ ನೀಡಿದ್ದ ನಾನು, ಇಲ್ಲಿ ಮುತ್ತಿಗೆ ಹಾಕಲು ಬಂದಿದ್ದೇವೆ. ಅತೀವೃಷ್ಟಿ ಬೆಳೆ ಹಾನಿಗೆ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಬೆಳೆ ಪರಿಹಾರವನ್ನು ತಕ್ಷಣ ರೈತರಿಗೆ ಕೊಡಬೇಕು. ಇದು ಲಜ್ಜೆಗೆಟ್ಟ ದರಿದ್ರ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ' ಎಂದು ಕಿಡಿಕಾರಿದರು.
ಯತೀಂದ್ರ ಹೇಳಿಕೆಗೂ ಟಾಂಗ್
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ, 'ನಮ್ಮ ತಂದೆ ಐದು ವರ್ಷ ಸಿಎಂ ಆಗಿ ಇರುತ್ತಾರೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, 'ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೆ ಅನ್ನೋದು ಮುಖ್ಯ ಅಲ್ಲ. ರೈತರ ಪರವಾಗಿ ಏನು ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ. ಆಂತರಿಕ ಕಚ್ಚಾಟದಿಂದ ವಾರದಲ್ಲಿ ಮೂರು ದಿನ ದಿಲ್ಲಿಗೆ ಹೋಗಿ ಕೂರುತ್ತಾರೆ ಎಂದು ವಿಜಯೇಂದ್ರ ತಿಳಿಸಿದರು.
ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಿ
ಕಬ್ಬು ಬೆಳೆಗೆ ಎಫ್‌ಆರ್‌ಪಿ (FRP) ನಿಗದಿ ಮಾಡಿದ್ದರೂ, ಆ ದರಕ್ಕಿಂತ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಲು ನಿಮಗೆ ಏನು ಕಷ್ಟ? ನಾನು ರೈತರಿಗೆ ಒಂದು ಭರವಸೆ ನೀಡುತ್ತೇನೆ. ಈ ಹಿಂದೆ ಯಡಿಯೂರಪ್ಪ ಅವರು ರೈತರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಇರುತ್ತಿದ್ದರು. ಅದೇ ರೀತಿ ನಾನು ಹಾಗೂ ನಮ್ಮ ಪಕ್ಷವು ಯಾವಾಗಲೂ ರೈತರ ಜೊತೆ ಇರುತ್ತೇವೆ. ಸರ್ಕಾರ ತಕ್ಷಣ ಮೆಕ್ಕೆಜೋಳ ಸೇರಿದಂತೆ ಯಾವುದೇ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸದಿರುವುದು ರೈತ ವಿರೋಧಿ ನೀತಿಯಾಗಿದ್ದು, ಇಂತಹ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

