ಇಡೀ ದೇಶದಲ್ಲೇ ವಿಮಾನಯಾನ ವ್ಯವಸ್ಥೆಯಲ್ಲಿ ನಡುಕ ಹುಟ್ಟು ಹಾಕಿದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ 5ನೇ ದಿನ ಕೊಂಚ ನಿಯಂತ್ರಣಕ್ಕೆ ಬಂದಿದೆ. ಶುಕ್ರವಾರ ಅತಿ ಗರಿಷ್ಠ 1000ದಷ್ಟು ರದ್ದಾಗಿದ್ದ ಸಂಚಾರ ರದ್ದತಿ ಪ್ರಮಾಣ ಶನಿವಾರ 850ಕ್ಕೆ ತಗ್ಗಿದೆ

ನವದೆಹಲಿ/ಮುಂಬೈ : ಇಡೀ ದೇಶದಲ್ಲೇ ವಿಮಾನಯಾನ ವ್ಯವಸ್ಥೆಯಲ್ಲಿ ನಡುಕ ಹುಟ್ಟು ಹಾಕಿದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ 5ನೇ ದಿನ ಕೊಂಚ ನಿಯಂತ್ರಣಕ್ಕೆ ಬಂದಿದೆ. ಶುಕ್ರವಾರ ಅತಿ ಗರಿಷ್ಠ 1000ದಷ್ಟು ರದ್ದಾಗಿದ್ದ ಸಂಚಾರ ರದ್ದತಿ ಪ್ರಮಾಣ ಶನಿವಾರ 850ಕ್ಕೆ ತಗ್ಗಿದೆ, ಇದೇ ವೇಳೆ, ತನ್ನ ನೆಟ್‌ವರ್ಕ್ ಸಂಪರ್ಕದ ಶೇ.95ರಷ್ಟು ಮಾರ್ಗಗಳಲ್ಲಿ ಹಾರಾಟವನ್ನು ಮರುಸ್ಥಾಪಿಸಿದೆ. ಅರ್ಥಾತ್‌ 138 ತಾಣಗಳ ಪೈಕಿ 135 ತಾಣಗಳಿಗೆ ಅದು ಸಂಚಾರ ಪುನಾರಂಭಿಸಿದೆ.

ಈ ಬಗ್ಗೆ ಇಂಡಿಗೋ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶುಕ್ರವಾರಕ್ಕೆ ಹೋಲಿಸಿದರೆ, ಶನಿವಾರ ಸಂಖ್ಯೆ ತಗ್ಗಿ 850 ವಿಮಾನಗಳು ರದ್ದಾಗಿವೆ.1500 ಹಾರಾಟಗಳು ನಡೆದಿವೆ. 138 ಊರುಗಳ ಪೈಕಿ 135 ಊರುಗಳಿಗೆ ಸಂಚಾರ ಪುನಃ ಆರಂಭ ಮಾಡಿದ್ದೇವೆ.

ಮುಂಬರುವ ದಿನಗಳಲ್ಲಿ ರದ್ದತಿ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ. ಎಲ್ಲಾ ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕದಲ್ಲಿದ್ದು, ನಮ್ಮ ವಿಮಾನಗಳ ಸೇವೆ ಬಗ್ಗೆ ಪ್ರಯಾಣಿಕರಿಗೆ ಟರ್ಮಿನಲ್‌ಗಳಲ್ಲಿ, ವೆಬ್‌ಸೈಟ್‌ನಲ್ಲಿ ಹಾಗೂ ನೇರ ಸಂದೇಶಗಳ ಮೂಲಕ ನಿರಂತರ ಮಾಹಿತಿ ನೀಡುತ್ತಿದ್ದೇವೆ’ ಎಂದು ತಿಳಿಸಿದೆ.

ಆದಾಗ್ಯೂ ‘ನಾವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ. ನಮ್ಮ ಗ್ರಾಹಕರ ವಿಶ್ವಾಸವನ್ನು ಮರಳಿ ಗಳಿಸಲು ನಾವು ಬದ್ಧರಾಗಿದ್ದೇವೆ. ಅಡಚಣೆಗಾಗಿ ಕ್ಷಮೆ ಇರಲಿ’ ಎಂದು ಸತತ 3ನೇ ದಿನ ಕ್ಷಮೆ ಕೇಳಿದೆ.

ಶುಕ್ರವಾರ 1000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದವು. ಈ ಅನಾನುಕೂಲತೆಗೆ ಕ್ಷಮೆ ಯಾಚಿಸಿದ್ದ ಇಂಡಿಗೋ ಸಿಇಒ, ‘ಶನಿವಾರ 1000ಕ್ಕಿಂತ ಕಡಿಮೆ ಫ್ಲೈಟ್‌ಗಳು ರದ್ದಾಗುವಂತೆ ನೋಡಿಕೊಳ್ಳುತ್ತೇವೆ’ ಎಂಬ ಭರವಸೆ ನೀಡಿದ್ದರು. ಅದರಂತೆ ರದ್ದತಿ ಕೊಂಚ ತಗ್ಗಿದೆ. ಪೈಲಟ್‌ಗಳ ವಿಶ್ರಾಂತಿ ಅವಧಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿದ್ದ ಆದೇಶವನ್ನು ಹಿಂಪಡೆದ ಪರಿಣಾಮ ಈ ಸುಧಾರಣೆ ಸಾಧ್ಯವಾಗಿದೆ.

ಮೊನ್ನೆ ರದ್ದಾಗಿದ್ದು 1000 ಅಲ್ಲ, 1600 ವಿಮಾನ!

ಮುಂಬೈ: ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೋ ಶುಕ್ರವಾರ ರದ್ದು ಮಾಡಿದ್ದು 1000 ಅಲ್ಲ, 1600 ವಿಮಾನ ಎಂದು ಗೊತ್ತಾಗಿದೆ. ‘ಶುಕ್ರವಾರ 700 ವಿಮಾನಗಳನ್ನು ಮಾತ್ರ ನಿರ್ವಹಿಸಿದ್ದೆವು’ ಎಂದು ಶನಿವಾರ ಇಂಡಿಗೋ ಹೇಳಿದೆ. ಇದು ಕಂಪನಿಯ ನಿತ್ಯದ 2300 ಹಾರಾಟದಲ್ಲಿ 1,600 ರದ್ದತಿಗಳನ್ನು ಸೂಚಿಸುತ್ತದೆ.ಮೂರು ದಿನಗಳ ಕಾಲ ಬಿಕ್ಕಟ್ಟಿನ ಬಗ್ಗೆ ಮೌನ ವಹಿಸಿದ್ದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, ‘ಶುಕ್ರವಾರ 1,000 ವಿಮಾನಗಳನ್ನುರದ್ದುಗೊಳಿಸಿದ್ದೇವೆ’ ಎಂದು ಅಂದು ಸಂಜೆ ಹೇಳಿದ್ದರು. ಅಲ್ಲದೆ, ’ಸ್ಥಿತಿ ಸಹಜವಾಗಲು ಡಿ.15ರವರೆಗೆ ಸಮಯ ಹಿಡಿಯಲಿದೆ’ ಎಂದಿದ್ದರು.

ಇಂಡಿಗೋ ವ್ಯತ್ಯಯ: ಪ್ರಯಾಣಿಕರ ಅನುಕೂಲಕ್ಕೆ 84 ವಿಶೇಷ ರೈಲುಗಳು

ನವದೆಹಲಿ: ದೇಶಾದ್ಯಂತ ಇಂಡಿಗೋ ಸೇವೆಯಲ್ಲಿ ವ್ಯತ್ಯಯ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ 84 ವಿಶೇಷ ರೈಲು ಸಂಚಾರ ಪ್ರಾರಂಭಿಸಿದೆ.ಬೆಂಗಳೂರು, ನವದೆಹಲಿ, ಮುಂಬೈ, ಚೆನ್ನೈ, ಪಟನಾ ಮತ್ತು ಹೌರಾ ಸೇರಿದಂತೆ ಪ್ರಮುಖ ನಗರಗಳ ಪರಿಸ್ಥಿತಿಯನ್ನು ಅವಲೋಕಿಸಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ವಿಮಾನ ರದ್ಧತಿಯಿಂದ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ಪ್ರಯಾಣಿಕರ ಅನುಕೂಲ ಹಾಗೂ ಸುರಕ್ಷತೆಗಾಗಿ ಹೊಸ ರೈಲುಗಳನ್ನು ಅಲ್ಪಾವಧಿಯಲ್ಲಿ ನಿಯೋಜಿಸಿದೆ.

ಇಂಡಿಗೋ ವಿಮಾನ ರದ್ದು: ಪ್ರಯಾಣಿಕರ ಅಳು!

ನವದೆಹಲಿ: ಶನಿವಾರವೂ ಇಂಡಿಗೋ ವಿಮಾನಗಳ ರದ್ದತಿ ಮುಂದುವರಿದಿದ್ದು, ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಕೆಲವು ಪರೀಕ್ಷಾರ್ಥಿಗಳು ಮಹತ್ವಾಕಾಂಕ್ಷಿ ಪರೀಕ್ಷೆ ಮಿಸ್ ಮಾಡಿಕೊಂಡೆವು ಎಂದು ಬೇಸರ ಮಾಡಿಕೊಂಡಿದ್ದರೆ, ಕೆಲವು ಪ್ರಯಾಣಿಕರು ಕಣ್ಣೀರು ಹಾಕಿದ್ದಾರೆ.ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಳುತ್ತಿರುವುದು ಮಾಧ್ಯಮಗಳ ಕ್ಯಾಮರಾಗಳಿಗೆ ಕಂಡುಬಂತು.

ಇನ್ನು ದಿಲ್ಲಿಯಲ್ಲಿ ಮಾತನಾಡಿದ ಓರ್ವ ಪ್ರಯಾಣಿಕ, ‘ನಾನು ಬೆಳಿಗ್ಗೆ 6.15 ರ ವಿಮಾನದಲ್ಲಿ ಗುವಾಹಟಿಗೆ ಹೋಗಬೇಕಿತ್ತು. 7 ತಿಂಗಳಿಂದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2025ರಲ್ಲಿ ಪಾಲ್ಗೊಳ್ಳಲು ಶ್ರಮಪಟ್ಟಿದ್ದೆ. ಆಯ್ಕೆ ಕೂಡ ಆಗಿದ್ದೆ. ಆದರೆ ಬುಕ್ ಮಾಡಿದ್ದ ಇಂಡಿಗೋ ವಿಮಾನ ವಿಳಂಬವಾಗಿದೆ. ಆದ್ದರಿಂದ, ನನಗೆ ಅಲ್ಲಿಗೆ ಸಕಾಲದಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ರಸ್ತೆ ಅಥವಾ ರೈಲು ಮೂಲಕ ಹೋಗಲು 3-4 ದಿನ ಬೇಕು’ ಎಂದು ಬೇಸರಿಸಿದರು.