ವಿಕ್ರಮ್ ಸಹ ಪಾಕಿಸ್ತಾನ ಮೂಲದವನಾಗಿದ್ದು, ಮದುವೆಯಾದ ಬಳಿಕ ಫೆಬ್ರವರಿ 26ರಂದು ನನ್ನನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದನು. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಯ್ತು

ನವದೆಹಲಿ: ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಬಳಿಯಲ್ಲಿ ನನ್ನ ಪತಿಯನ್ನು ವಾಪಸ್ ಕರಾಚಿಗೆ ಕಳುಹಿಸಿ ಎಂದು ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಕರಾಚಿಯ ನಿವಾಸಿಯಾಗಿರುವ ನಿಕಿತಾ ನಾಗದೇವ್ ಎಂಬವರು ತನ್ನ ಪತಿ ವಿಕ್ರಮ್ ನಾಗದೇವ್ ಈ ಮನವಿ ಮಾಡಿಕೊಂಡಿದ್ದಾರೆ. ತನ್ನನ್ನು ಕರಾಚಿಯಲ್ಲಿ ಬಿಟ್ಟು ದೆಹಲಿಯಲ್ಲಿರುವ ವಿಕ್ರಮ್ ಸದ್ಯ ಎರಡನೇ ಮದುವೆಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿರುವ ನಿಕಿತಾ ವಿಡಿಯೋ ಮೂಲಕ ಈ ಮನವಿ ಮಾಡಿಕೊಂಡಿದ್ದಾರೆ.

ಮದುವೆ ಬಳಿಕ ಜೀವನವೇ ಬದಲಾಯ್ತು!

26ನೇ ಜನವರಿ 2020ರಂದು ಕರಾಚಿಯಲ್ಲಿ ಹಿಂದೂ ಸಂಪ್ರದಾಯದಂತೆ ಲಾಂಗ್ ಟರ್ಮ್ ವೀಸಾ ಮೂಲಕ ಬಂದಿದ್ದ ಇಂದೋರ್ ಮೂಲದ ವಿಕ್ರಮ್ ಜೊತೆ ತನ್ನ ಮದುವೆಯಾಗಿತ್ತು. ವಿಕ್ರಮ್ ಸಹ ಪಾಕಿಸ್ತಾನ ಮೂಲದವನಾಗಿದ್ದು, ಮದುವೆಯಾದ ಬಳಿಕ ಫೆಬ್ರವರಿ 26ರಂದು ನನ್ನನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದನು. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಯ್ತು ಎಂದು ನಿಕಿತಾ ಹೇಳಿಕೊಂಡಿದ್ದಾರೆ.

ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿಲ್ಲ

9ನೇ ಜುಲೈ 2020ರಂದು ವೀಸಾ ತಾಂತ್ರಿಕತೆಯಲ್ಲಿ (visa technicality) ಸಮಸ್ಯೆಯುಂಟಾಗಿದ್ದರಿಂದ ನನ್ನನ್ನು ಅಟಾರಿ ಬಾರ್ಡರ್‌ಗೆ ಕರೆದುಕೊಂಡು ಬಂದು, ಬಲವಂತವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಯ್ತು. ನಂತರ ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ರಯತ್ನವನ್ನು ವಿಕ್ರಮ್ ಮಾಡಿಲ್ಲ. ನಾನು ಎಷ್ಟೇ ಮನವಿ ಮಾಡಿಕೊಂಡರೂ ವಿಕ್ರಮ್ ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿಲ್ಲ ಎಂದು ನಿಕಿತಾ ಭಾವುಕರಾಗಿದ್ದಾರೆ.

ನನಗೆ ಮೋಸ ಆಗಿದೆ, ನ್ಯಾಯ ಸಿಕ್ತಿಲ್ಲ

ಈವರೆಗೂ ನನಗೆ ನ್ಯಾಯ ಸಿಕ್ಕಿಲ್ಲ. ಇಂತಹ ಘಟನೆಗಳಿಂದ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಹಲವು ಮಹಿಳೆಯರು ಇಂದಿಗೂ ಮದುವೆ ಬಳಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡಿಕೊಂಡರೂ ನನಗೆ ನ್ಯಾಯ ಸಿಕ್ಕಿಲ್ಲ. ನನಗೆ ಮೋಸ ಆಗಿದೆ ಎಂದು ನಿಕಿತಾ ಕಣ್ಣೀರು ಹಾಕಿದ್ದಾರೆ.

ಕೋವಿಡ್-19 ಕಾಲಘಟ್ಟದ ವೇಳೆ ನಾನು ಭಾರತಕ್ಕೆ ಹಿಂದಿರುಗಬೇಕೆಂದು ನನ್ನ ಮೇಲೆ ಒತ್ತಡ ಹಾಕಲಾಯ್ತು. ಪಾಕಿಸ್ತಾನಕ್ಕೆ ಬಂದ ನಂತರ ವಿಕ್ರಮ್ ಸಹ ಇಲ್ಲಿಗೆ ಬಂದಿಲ್ಲ ಮತ್ತು ನನ್ನನ್ನು ಕರೆಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆ. ಭಾರತದ ಪ್ರತಿಯೊಬ್ಬ ಮಹಿಳೆಗೂ ನ್ಯಾಯ ಸಿಗಬೇಕಿದೆ ಎಂದು ನಿಕಿತಾ ಆಗ್ರಹಿಸಿದ್ದಾರೆ.

ವಿಕ್ರಮ್ ವಿರುದ್ಧ ದೂರು ದಾಖಲಿಸಿರುವ ನಿಕಿತಾ

ಇದೀಗ ವಿಕ್ರಮ್ ದೆಹಲಿಯಲ್ಲಿ ಮತ್ತೊಂದು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಈಗಾಗಲೇ ಕಾನೂನಿನ ಪ್ರಕಾರ ಮದುವೆಯಾಗಿದ್ದರೂ, ಮತ್ತೊಮ್ಮೆ ಹಸೆಮಣೆ ಏರುತ್ತಿದ್ದಾನೆ. ಈ ಸಂಬಂಧ 27 ಜನವರಿ 2025ರಂದು ವಿಕ್ರಮ್ ವಿರುದ್ಧ ನಿಕಿತಾ ದೂರು ದಾಖಲಿಸಿದ್ದು, ಸದ್ಯ ಈ ಪ್ರಕರಣ ಮಧ್ಯಪ್ರದೇಶ ಹೈಕೋರ್ಟ್‌ನಿಂದ ಅಧಿಕಾರ ಪಡೆದ ಸಿಂಧಿ ಪಂಚ ಮಧ್ಯಸ್ಥಿಕೆ ಮತ್ತು ಕಾನೂನು ಮಂಡಳಿ ಕೇಂದ್ರದ ಮುಂದೆ ಬಂದಿದೆ. ವಿಕ್ರಮ್ ಮತ್ತು ಆತ ಮದುವೆಯಾಗುತ್ತಿರುವ ಯುವತಿಗೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟ: ಉತ್ತರ ಗೋವಾದ ಅರ್ಪೋರಾ ನೈಟ್‌ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು

ಈ ಸಂಬಂಧ ನಡೆದ ಮಧ್ಯಸ್ಥಿಕೆಯೂ ವಿಫಲವಾಗಿದೆ ಎಂದು ವರದಿಯಾಗಿದೆ. ಏಪ್ರಿಲ್ 30, 2025 ರಂದು ಕೇಂದ್ರದ ವರದಿಯ, ಸಂಗಾತಿಗಳು ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ, ಪ್ರಕರಣವು ಪಾಕಿಸ್ತಾನದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ. ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಸಹ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು