ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಣಕ್ಕೆ ದೆಹಲಿ ಪೊಲೀಸರು ತಮಗೆ ಸಮನ್ಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ  ಇದು ರಾಜಕೀಯ ಪ್ರೇರಿತ ಎಂದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಣಕ್ಕೆ ದೆಹಲಿ ಪೊಲೀಸರು ನಮಗೆ ಸಮನ್ಸ್ ನೀಡಿದ್ದು, ಆ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇದನ್ನು ಖಂಡಿಸುತ್ತೇನೆ. ಈ ಕುರಿತು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಿದ್ದೇವೆ. ಯಾವುದೇ ಮುಚ್ಚುಮರೆ ಮಾಡಿಲ್ಲ. ಆದರೂ ಇ.ಡಿ. ಚಾರ್ಜ್‌ ಶೀಟ್ ಹಾಕಿರುವುದು ಏತಕ್ಕಾಗಿ ಎಂಬುದು ತಿಳಿದಿಲ್ಲ. ಇನ್ನು, ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಾನೂ ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ

ನನಗೆ ಮತ್ತು ನನ್ನ ಸಹೋದರ ಡಿ.ಕೆ.ಸುರೇಶ್‌ಗೆ ಕಳೆದ ಶುಕ್ರವಾರ ಸಮನ್ಸ್ ನೀಡಿದೆ. ಈಗಾಗಲೇ ನಾವು ಈ ಹಿಂದೆಯೇ ಉತ್ತರ ನೀಡಿದ್ದೇವೆ. ಆದರೂ, ನಮಗೆ ಸಮನ್ಸ್ ನೀಡಿರುವುದು ಆಘಾತಕಾರಿ. ದೆಹಲಿ ಪೊಲೀಸರು ಡಿ.19ರ ಒಳಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ ಎಂದು ತಿಳಿಸಿದರು. ನಾವು ತೆರಿಗೆ ಪಾವತಿಸುತ್ತಿದ್ದು, ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ. ಕಿರುಕುಳ ನೀಡುವ ಉದ್ದೇಶದಿಂದಲೇ ಪಿಎಂ ಎಲ್‌ಎ ಪ್ರಕರಣ ದಾಖಲಿಸಿದ್ದರು. ನಂತರ ಅದು ಏನಾಯಿತು ಎಂಬುದು ತಿಳಿದಿದೆ. ಸೋನಿಯಾ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಗೊಂದಲ ಮೂಡಿಸುವ ಉದ್ದೇಶ ಇದರ ಹಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥೆಗಳು. ನಾವು ಕಾಂಗ್ರೆಸ್ಸಿಗರಾದ ಕಾರಣಕ್ಕೆ ಈ ಸಂಸ್ಥೆಗಳು ಕಷ್ಟಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್‌ಗಳಿಂದ ದೇಣಿಗೆ ನೀಡಿದ್ದೆವು. ನಮ್ಮಂತೆ ಅನೇಕ ಜನ ಸಹಾಯ ಮಾಡಿದ್ದಾರೆ. ಡಿ.ಕೆ.ಸುರೇಶ್ ಸಂಸದರಾದ ಸಮಯದಲ್ಲಿ ಒಂದಷ್ಟು ಹಣ ದೇಣಿಗೆ ನೀಡಿದ್ದರು. ಇ.ಡಿ. ನೋಟಿಸ್ ಅನ್ನು ವಿವರವಾಗಿ ತಿಳಿದುಕೊಂಡು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ರಾಜಕೀಯ ದ್ವೇಷದ ಆರೋಪ ಸಲ್ಲ: ಬಿವೈವಿ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸ್ ನೀಡಿರುವ ನೋಟಿಸ್ ಹಿಂದೆ ತೇಜೋವಧೆಗೆ ಯತ್ನ ಹಾಗೂ ರಾಜಕೀಯ ದ್ವೇಷದ ಉದ್ದೇಶವಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿರುವುದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಪುರಾವೆ ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.