ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭದ ಮಾರನೇ ದಿನ (ಡಿ.9) 15000- 20000 ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭದ ಮಾರನೇ ದಿನ (ಡಿ.9) 15000- 20000 ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬಡಿದೆಬ್ಬಿಸಲು ಮುಂದಾಗುತ್ತೇವೆ. ನಂತರ ಸದನದಲ್ಲೂ ರೈತರ ಚರ್ಚಿಸುತ್ತೇವೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯ ಗೇಟ್ ಅಳವಡಿಕೆ ಕಾರ್ಯ ವಿಳಂಬ
ತುಂಗಭದ್ರಾ ಜಲಾಶಯ ಗೇಟ್ ಅಳವಡಿಕೆ ಕಾರ್ಯ ವಿಳಂಬವಾಗಿದ್ದು, ಇದರಿಂದ ರೈತರು ಎರಡನೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿನ ರೈತರಿಗೆ ಎಕರೆಗೆ 25 ಸಾವಿರ ರು. ಪರಿಹಾರ ನೀಡಬೇಕು. ಇವೆಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ಅವಕಾಶ ನೀಡಬೇಕು. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ, ರೈತರ ಸಂಕಷ್ಟದ ಕುರಿತು, ನೀರಾವರಿ ಸಮಸ್ಯೆ ಬಗ್ಗೆ ಚರ್ಚಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಸವಿಸ್ತಾರವಾಗಿ ಚರ್ಚಿಸಿದ್ದೇವೆ
ಅಧಿವೇಶನದ ಕುರಿತು ನಾನು, ವಿಪಕ್ಷ ನಾಯಕರು, ಬಿಜೆಪಿ- ಜೆಡಿಎಸ್ ಮುಖಂಡರು ಒಟ್ಟಿಗೆ ಕೂತು ಸವಿಸ್ತಾರವಾಗಿ ಚರ್ಚಿಸಿದ್ದೇವೆ ಎಂದರು.
ಪ್ರತಿ ಬಾರಿ ಬೆಳಗಾವಿ ಅಧಿವೇಶನದಲ್ಲಿ ನಾಮಕಾವಾಸ್ತೆ ಒಂದು ದಿನ ಚರ್ಚೆ ನಡೆಯುತ್ತಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದ್ದು, ಅಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂಬ ಆಶಯ ಅವರದಾಗಿತ್ತು. ಆದರೆ, ಅದು ಆಗುತ್ತಿಲ್ಲ ಎಂದು ಟೀಕಿಸಿದರು.
ಅಧಿವೇಶನದ ಆರಂಭದ ದಿನಗಳಲ್ಲೇ ಈ ಸಮಸ್ಯೆಗಳನ್ನು ಚರ್ಚಿಸಲು ತೀರ್ಮಾನಿಸಿದ್ದೇವೆ. ಕಬ್ಬಿನ ಬೆಳೆಗಾರರ ಸಮಸ್ಯೆ ಪರಿಹಾರವಾಗಿಲ್ಲ. ಮೆಕ್ಕೆಜೋಳ ಬೆಳೆಯುವ ರೈತರು 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಖರೀದಿ ಕೇಂದ್ರವನ್ನೂ ಆರಂಭಿಸಿಲ್ಲ ಎಂದು ಆಕ್ಷೇಪಿಸಿದರು.


