CBSE ಬೋರ್ಡ್ ಪರೀಕ್ಷೆ 2026ರಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಕೇವಲ ಓದುವುದು ಮಾತ್ರ ಸಾಕಾಗುವುದಿಲ್ಲ. ಅದರ ಜೊತೆಗೆ ಸರಿಯಾದ ತಂತ್ರಗಾರಿಕೆಯೂ ಅಷ್ಟೇ ಮುಖ್ಯವಾಗಿರುತ್ತದೆ.
ಪ್ರತಿ ವರ್ಷ ಅನೇಕ ವಿದ್ಯಾರ್ಥಿಗಳು ಚೆನ್ನಾಗಿ ತಯಾರಿ ನಡೆಸಿದರೂ ಸಣ್ಣಪುಟ್ಟ ತಪ್ಪುಗಳಿಂದ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ವಿಶೇಷವೆಂದರೆ, ಈ ತಪ್ಪುಗಳನ್ನು ಸುಲಭವಾಗಿ ತಪ್ಪಿಸಬಹುದು.
ನೀವು ಈ ಬಾರಿ 10ನೇ ಅಥವಾ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದರೆ, ಈ 10 ಸಾಮಾನ್ಯ ತಪ್ಪುಗಳಿಂದ ಖಂಡಿತವಾಗಿಯೂ ದೂರವಿರಿ.
ಒಂದೇ ಬಾರಿಗೆ ಹಲವು ಪುಸ್ತಕಗಳನ್ನು ನಂಬುವುದು ದೊಡ್ಡ ತಪ್ಪು. ಇದರಿಂದ ಮನಸ್ಸು ಗೊಂದಲಕ್ಕೀಡಾಗುತ್ತದೆ. CBSEಯಲ್ಲಿ ಹೆಚ್ಚಿನ ಪ್ರಶ್ನೆಗಳು NCERT ಪುಸ್ತಕಗಳಿಂದಲೇ ಬರುತ್ತವೆ. ಮೊದಲು ಅದನ್ನೇ ಚೆನ್ನಾಗಿ ಓದಿಕೊಳ್ಳಿ.
ಕೆಲವು ವಿದ್ಯಾರ್ಥಿಗಳು ನಿದ್ದೆ ಕಡಿಮೆ ಮಾಡಿ ಹೆಚ್ಚು ಓದಬಹುದು ಎಂದು ಭಾವಿಸುತ್ತಾರೆ. ಆದರೆ, ಕಡಿಮೆ ನಿದ್ದೆಯಿಂದ ಮೆದುಳು ದಣಿಯುತ್ತದೆ. ಪರೀಕ್ಷೆಯ ದಿನ ನೆನಪಿಸಿಕೊಂಡ ವಿಷಯಗಳೂ ಮರೆತುಹೋಗಬಹುದು.
ಹೊಸ ವಿಷಯಗಳನ್ನು ಕಲಿಯುವ ಭರದಲ್ಲಿ ಹಳೆಯ ಪಾಠಗಳನ್ನು ಪುನರಾವರ್ತಿಸುವುದನ್ನು ಬಿಡುವುದು ನಷ್ಟಕ್ಕೆ ಕಾರಣವಾಗುತ್ತದೆ. ಕೊನೆಯ ಕ್ಷಣದಲ್ಲಿ ರಿವಿಷನ್ ಮಾಡುವುದೇ ಅತಿ ದೊಡ್ಡ ಅಸ್ತ್ರ.
'ಅವನು ಅಷ್ಟು ಓದಿದ್ದಾನೆ, ನಾನು ಓದಿಲ್ಲ' ಎಂಬ ಯೋಚನೆ ಒತ್ತಡವನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ತಯಾರಿ ವಿಧಾನ ವಿಭಿನ್ನವಾಗಿರುತ್ತದೆ. ನಿಮ್ಮ ಗಮನವನ್ನು ನಿಮ್ಮ ಮೇಲೆಯೇ ಇಟ್ಟುಕೊಳ್ಳಿ.
ಒಂದೇ ಪ್ರಶ್ನೆಗೆ ಹೆಚ್ಚು ಸಮಯ ವ್ಯಯಿಸಿದರೆ ಉಳಿದ ಪ್ರಶ್ನೆಗಳು ತಪ್ಪಿಹೋಗುತ್ತವೆ. ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಕಠಿಣ ಪ್ರಶ್ನೆಗಳತ್ತ ಗಮನಹರಿಸಿ.
ಕೆಲವೊಮ್ಮೆ “Explain”, “Define” ಅಥವಾ “Write in 50 words” ನಂತಹ ಪದಗಳನ್ನು ಕಡೆಗಣಿಸಲಾಗುತ್ತದೆ. ಇದರಿಂದಾಗಿ ಪೂರ್ತಿ ಉತ್ತರ ಬರೆದರೂ ಅಂಕಗಳು ಕಡಿತವಾಗಬಹುದು.
ಉದ್ದವಾದ ಪ್ಯಾರಾಗ್ರಾಫ್‌ಗಳ ಬದಲು ಪಾಯಿಂಟ್‌ಗಳಲ್ಲಿ ಬರೆಯಿರಿ. ಹೆಡ್ಡಿಂಗ್, ಸಬ್‌ಹೆಡ್ಡಿಂಗ್ ಮತ್ತು ಅಗತ್ಯವಿದ್ದಲ್ಲಿ ಚಿತ್ರಗಳನ್ನು ಬಳಸಿ. ಇದರಿಂದ ಉತ್ತರ ಪತ್ರಿಕೆ ಅಚ್ಚುಕಟ್ಟಾಗಿ ಕಾಣುತ್ತದೆ.
ಕೈಬರಹ ಸ್ಪಷ್ಟವಾಗಿಲ್ಲದಿದ್ದರೆ, ಮೌಲ್ಯಮಾಪಕರಿಗೆ ಓದಲು ಕಷ್ಟವಾಗುತ್ತದೆ. ಅಚ್ಚುಕಟ್ಟಾದ ಉತ್ತರ ಪತ್ರಿಕೆ ಉತ್ತಮ ಅಭಿಪ್ರಾಯ ಮೂಡಿಸುವುದರ ಜೊತೆಗೆ ಹೆಚ್ಚು ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತದೆ.
ಕೊನೆಯಲ್ಲಿ 10-15 ನಿಮಿಷಗಳನ್ನು ಉಳಿಸಿಕೊಳ್ಳಿ. ಅಪೂರ್ಣ ಉತ್ತರಗಳು, ತಪ್ಪು ಲೆಕ್ಕಾಚಾರಗಳು ಅಥವಾ ಬಿಟ್ಟುಹೋದ ಪ್ರಶ್ನೆಗಳು ಈ ಸಮಯದಲ್ಲಿ ಗಮನಕ್ಕೆ ಬರುತ್ತವೆ.
ಆತಂಕಗೊಂಡರೆ ಸುಲಭ ಪ್ರಶ್ನೆಗಳೂ ಕಷ್ಟವೆನಿಸುತ್ತವೆ. ನಿಯಮಿತವಾಗಿ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಅಣಕು ಪರೀಕ್ಷೆಗಳನ್ನು ಬರೆಯುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.