ಮಹಿಳಾ ಮೀಸಲಾತಿ ಕುರಿತ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಗ್ವಾದದ ನಡುವೆ, ತುಮಕೂರಿನ ರಥೋತ್ಸವದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ವಿರುದ್ಧ ಬಾಳೆಹಣ್ಣಿನ ಮೇಲೆ ಸಂದೇಶ ಬರೆದು ರಥಕ್ಕೆ ಎಸೆಯಲಾಗಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಿವಾದ ನಡೆಯುತ್ತಲೇ ಇದೆ. ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ವಿರುದ್ಧ ಬಿಜೆಪಿ ಕಿಡಿ ಕಾರುತ್ತಿದ್ದರೆ, ಇತ್ತ ಉಳಿದ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎನ್ನುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಈಗ ಮಾತ್ರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಇದಾಗಲೇ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಆಕ್ರೋಶ
ಇದರ ನಡುವೆಯೇ ಮಹಿಳಾ ಮೀಸಲಾತಿಯನ್ನು ಜಾರಿ ಮಾಡಲು ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ತುಮಕೂರಿನ ಕೆಂಕೆರೆ ಚೆನ್ನಬಸವೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ಈ ರಥೋತ್ಸವದಲ್ಲಿ ಜನರು ಬಾಳೆಹಣ್ಣಿನ ಮೇಲೆ ತಮ್ಮ ಇಷ್ಟಾರ್ಥಗಳನ್ನು ಬರೆದು ಅದನ್ನು ರಥಕ್ಕೆ ಎಸೆಯುತ್ತಾರೆ. ಹೀಗೆ ಮಾಡಿದರೆ ತಮ್ಮ ಕೋರಿಕೆ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಇಂಥ ರಥೋತ್ಸವ ಹಾಗೂ ಸಂಪ್ರದಾಯ ಕರ್ನಾಟಕದಲ್ಲಿ ಹಲವು ಊರುಗಳಲ್ಲಿ ಇದೆ.
ಬಾಳೆಹಣ್ಣಿನ ಮೇಲೆ ಕೋರಿಕೆ
ಪ್ರತಿಬಾರಿಯೂ ಬಾಳೆಹಣ್ಣಿನ ಮೇಲೆ ಚಿತ್ರ ವಿಚಿತ್ರ ಕೋರಿಕೆ ಕೇಳುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ಬಾಳೆಹಣ್ಣಿನ ಮೇಲೆ ಕಾಂಗ್ರೆಸ್ ವಿರುದ್ಧ ಬರೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಗೆ ತಕ್ಕಪಾಠ ಕಲಿಸುತ್ತೇವೆ ಎಂದು ಬಾಳೆಹಣ್ಣಿನ ಮೇಲೆ ಬರೆದು ಅದನ್ನು ರಥಕ್ಕೆ ಎಸೆಯಲಾಗಿದೆ.
ಇದರ ಫೋಟೋ ಮತ್ತು ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಟ್ಟಿನಲ್ಲಿ ದೇವರ ರಥೋತ್ಸವದಲ್ಲಿಯೂ ರಾಜಕೀಯ ಪ್ರವೇಶ ಮಾಡುತ್ತಿರುವುದಕ್ಕೆ ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


