ಸ್ಯಾಂಡಲ್ವುಡ್ ನಟಿ ಸುಧಾರಾಣಿ ಅವರು ಬೆಂಗಳೂರು ಹಾಲು ಒಕ್ಕೂಟದ (BAMUL) 'ನಂದಿನಿ' ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಡಾ.ರಾಜ್ಕುಮಾರ್ ಕುಟುಂಬದ ಹಾದಿಯಲ್ಲಿಯೇ ಅವರು ಸಾಗುತ್ತಿದ್ದಾರೆ.
ಬೆಂಗಳೂರು (ಫೆ.10): ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ'ಗೆ ಈಗ ಸ್ಯಾಂಡಲ್ವುಡ್ನ ಎವರ್ಗ್ರೀನ್ ನಟಿ ಸುಧಾರಾಣಿ ಅವರ ಬಲ ಸಿಕ್ಕಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (KMF) ಪ್ರಮುಖ ಭಾಗವಾದ ಬೆಂಗಳೂರು ಹಾಲು ಒಕ್ಕೂಟ (BAMUL), ನಟಿ ಸುಧಾರಾಣಿ ಅವರನ್ನು ನಂದಿನಿ ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಅಧಿಕೃತವಾಗಿ ಘೋಷಿಸಿದೆ.
ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಈ ಬಗ್ಗೆ ಮಾಹಿತಿ ನೀಡಿ, "ನಂದಿನಿ ಬ್ರ್ಯಾಂಡ್ನ ಮೌಲ್ಯಗಳನ್ನು ಜನರಿಗೆ ತಲುಪಿಸಲು ಸುಧಾರಾಣಿ ಅವರಂತಹ ವಿಶ್ವಾಸಾರ್ಹ ವ್ಯಕ್ತಿತ್ವದ ಅಗತ್ಯವಿತ್ತು. ಅವರ ಸರಳತೆ ಮತ್ತು ಕೌಟುಂಬಿಕ ಗೌರವ ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಹೊಸ ಮೆರುಗು ನೀಡಲಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ ಕುಟುಂಬದ ಹಾದಿಯಲ್ಲಿ ಸುಧಾರಾಣಿ
ನಂದಿನಿ ಬ್ರ್ಯಾಂಡ್ ಮತ್ತು ಕನ್ನಡ ಚಿತ್ರರಂಗದ ನಡುವಿನ ಬಾಂಧವ್ಯ ಅನನ್ಯವಾದದ್ದು. ಈ ಹಿಂದೆ ಡಾ.ರಾಜ್ಕುಮಾರ್ ಅವರು 1996ರಲ್ಲಿ ಸಂಭಾವನೆ ಪಡೆಯದೆ ರೈತರ ಹಿತಕ್ಕಾಗಿ ನಂದಿನಿಯ ಮೊದಲ ರಾಯಭಾರಿಯಾಗಿದ್ದರು. ಇದೇ ಹಾದಿ ಹಿಡಿದ ಪುನೀತ್ ರಾಜ್ಕುಮಾರ್, ತಂದೆಯಂತೆಯೇ ಉಚಿತವಾಗಿ ಪ್ರಚಾರ ನೀಡಿ ಬ್ರ್ಯಾಂಡ್ ಅನ್ನು ಮನೆಮಾತಾಗಿಸಿದರು. ಬಳಿಕ ಶಿವರಾಜ್ಕುಮಾರ್ ಕೂಡ ಉಚಿತವಾಗಿ ರಾಯಭಾರಿಯಾಗಿ ನಂದಿನಿ ಉತ್ಪನ್ನಗಳ ವಿಶ್ವಾಸಾರ್ಹತೆ ಹೆಚ್ಚಿಸಿದರು.
ಈಗ ಅದೇ ಗೌರವಯುತ ಸ್ಥಾನಕ್ಕೆ ಸುಧಾರಾಣಿ ಅವರು ಆಯ್ಕೆಯಾಗಿದ್ದು, ನಂದಿನಿ ಕುಟುಂಬಕ್ಕೆ ಸ್ತ್ರೀಶಕ್ತಿಯ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ನಂದಿನಿ ಹಾಲು, ಮೊಸರು ಹಾಗೂ ಇತರ ಉತ್ಪನ್ನಗಳ ಜಾಹೀರಾತುಗಳಲ್ಲಿ ಸುಧಾರಾಣಿ ಮಿಂಚಲಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಸುಧಾರಾಣಿ, ಗೌರವ, ಧನ್ಯತೆ ಹಾಗು ಕೃತಜ್ಞತೆ ಮನಸ್ಸಿನ ತುಂಬಾ. ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ (BAMUL Nandini) ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ.
ಬಮುಲ್ ಅಧ್ಯಕ್ಷರಾದ ಗೌರವಾನ್ವಿತ ಡಿ. ಕೆ. ಸುರೇಶ್ ಅವರೊಂದಿಗೆ ಹಾಗೂ ಬಮುಲ್ನ ಹೊಸ ಉತ್ಪನ್ನಗಳು, ತಂತ್ರಯೋಜನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮುನ್ನಡೆಸುತ್ತಿರುವ @manohar.iyer ಅವರೊಂದಿಗೆ ಆತ್ಮೀಯ ಹಾಗೂ ಅರ್ಥಪೂರ್ಣ ಸಂವಾದ ನಡೆಯಿತು. ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು.
ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿದೆ. ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.


