ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿ ಡೇವಿಡ್ ಪತ್ನಿ ಸುಮಿತ್ರಾಳನ್ನು ಕೊಲೆ ಮಾಡಿ ನಂತರ ತಾನೂ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಏ.22): ಸಿಲಿಕಾನ್ ಸಿಟಿಯಲ್ಲಿ ಕೌಟುಂಬಿಕ ಕಲಹವೊಂದು ಭೀಕರ ಅಂತ್ಯ ಕಂಡಿದ್ದು, ಪತ್ನಿಯನ್ನ ಕೊಲೆ ಮಾಡಿ ಪತಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 10 ವರ್ಷಗಳ ಹಿಂದೆ ವಿವಾಹವಾಗಿದ್ದ ಡೇವಿಡ್ ಮತ್ತು ಸುಮಿತ್ರಾ ದಂಪತಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತಿ ಡೇವಿಡ್ ತನ್ನ ಪತ್ನಿ ಸುಮಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಪತ್ನಿಯ ಸಾವಿನ ಬಳಿಕ ಡೇವಿಡ್ ಅದೇ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸುಮಿತ್ರಾ ಅವರ ಮೃತದೇಹ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಡೇವಿಡ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಆ*ತ್ಮಹ*ತ್ಯೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.
ತೀವ್ರ ಪ್ರತಿರೋಧ ಒಡ್ಡಿದ್ದ ಪತ್ನಿ
ಕೊಲೆಯಾದ ಸುಮಿತ್ರಾ ಸಾವು ಸಂಭವಿಸುವ ಮುನ್ನ ಪತಿಯ ವಿರುದ್ಧ ತೀವ್ರ ಪ್ರತಿರೋಧ ಒಡ್ಡಿದ್ದಾರೆ ಎನ್ನಲಾಗಿದೆ. ಪತಿ ಡೇವಿಡ್‌ನ ಕೈಗಳ ಮೇಲೆ ಗಾಯದ ತರಚಿದ ಗುರುತುಗಳು ಪತ್ತೆಯಾಗಿದ್ದು, ಇದು ಇಬ್ಬರ ನಡುವೆ ನಡೆದ ಸಂಘರ್ಷಕ್ಕೆ ಸಾಕ್ಷಿಯಾಗಿದೆ.
ಸಂಬಂಧಿಕರ ಮಾಹಿತಿಯ ಪ್ರಕಾರ, ಈ ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಜಗಳ ನಡೆಯುತ್ತಿತ್ತು. ಜಗಳ ಹೆಚ್ಚಾಗಿದ್ದ ಕಾರಣ, ಮಕ್ಕಳನ್ನು ಸೋದರ ಸಂಬಂಧಿಯೊಬ್ಬರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಇದರಿಂದಾಗಿ ಮಕ್ಕಳು ಈ ಭೀಕರ ಘಟನೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಸಿಪಿ ಭೇಟಿ ಮತ್ತು ತನಿಖೆ
ಘಟನಾ ಸ್ಥಳಕ್ಕೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಪ್ರಾಥಮಿಕವಾಗಿ ಪತ್ನಿಯನ್ನ ಕೊಂದು ಪತಿ ಆ*ತ್ಮಹ*ತ್ಯೆ ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಮನೆಯಲ್ಲಿ ದಂಪತಿಗಳ ಶವ ಪತ್ತೆಯಾಗಿದ್ದು, ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದು ಕೊಲೆಯೋ ಅಥವಾ ಆ*ತ್ಮಹ*ತ್ಯೆಯೋ ಎಂಬ ಬಗ್ಗೆ ನಿಖರ ಮಾಹಿತಿ ತನಿಖೆಯ ನಂತರವಷ್ಟೇ ತಿಳಿಯಲಿದೆ," ಎಂದು ಹೇಳಿದ್ದಾರೆ.


