ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ ಘಟನೆ ಕುರಿತು ರಿಕ್ಕಿ ಕೇಜ್ ರೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಬೆಂಗಳೂರು (ಡಿ.18) ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಆಗಮಿಸಿದ ಆರೋಪಿ ಮನೆ ಮುಂಭಾಗದಲ್ಲಿದ್ದ ಸಂಪ್ ಮುಚ್ಚಳ ಕದ್ದು ಪರಾರಿಯಾಗಿದ್ದ. ಬಳಿಕ ಈ ಸಂಪ್ ಮುಚ್ಚಳವನ್ನು 700 ರೂಪಾಯಿ ಮಾರಾಟ ಮಾಡಿದ್ದ. ರಿಕ್ಕಿ ಕೇಜ್ ನೀಡಿದ್ದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದ ಇಂದಿರಾ ನಗರ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ
ಗುಜರಿ ಕೆಲಸ ಮಾಡಿಕೊಂಡಿದ್ದ ಆರೋಪಿ
ರಿಕ್ಕಿ ಕೇಜ್ ಸೇರಿದಂತೆ ಕುಟುಂಬಸ್ಥರು ಮನೆಯಲ್ಲಿ ಇಲ್ಲದಿರುವಾಗ ಕತ್ತಲಾಗುತ್ತಿದ್ದಂತೆ ಆರೋಪಿ ಶಿವಕುಮಾರ್ ಮನೆಗೆ ಆಗಮಿಸಿದ್ದಾನೆ. ಹೆಲ್ಮೆಟ್ ಧರಿಸಿ ಡೆಲಿವರಿ ವ್ಯಕ್ತಿಗಳ ಸೋಗಿನಲ್ಲಿ ಆಗಮಿಸಿ ನೇರವಾಗಿ ಮನೆಯ ಮುಂಭಾಗದಲ್ಲಿದ್ದ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ರಿಕ್ಕಿ ಕೇಜ್ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆರೋಪಿ ಶಿವಕುಮಾರ್ ಗುಜುರಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಹಲೆವೆಡೆಗಳಿಂದ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಇದೇ ರೀತಿ ರಿಕ್ಕಿ ಕೇಜ್ ಮನೆಯಿಂದಲೂ ಸಂಪ್ ಮುಚ್ಚಳ ಕಳ್ಳತನ ಮಾಡಿ ಮಾರಾಟ ಮಾಡಿದ್ದ.
ಮತ್ತೊಬ್ಬ ಆರೋಪಿಗಾಗಿ ಪೊಲೀಸರ ಹುಡುಕಾಟ
ಆರೋಪಿ ಶಿವಕುಮಾರ್ ಜೊತೆಗೆ ಮೊತ್ತಬ್ಬ ಆರೋಪಿ ಕೂಡ ಆಗಮಿಸಿದ್ದ. ಈ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇಬ್ಬರು ಸೇರಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸಿಸಿಟಿವಿ ಸೇರಿದಂತೆ ಇತರ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿಯಲ್ಲಿ ದಾಖಾಗಿತ್ತು ಕೃತ್ಯ
ರಿಕ್ಕಿ ಕೇಜ್ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಕಳ್ಳತನ ದೃಶ್ಯಗಳು ದಾಖಲಾಗಿತ್ತು. ಘಟನೆ ಬಳಿಕ ರಿಕ್ಕಿ ಕೇಜ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ರಿಕ್ಕಿ ಕೇಜ್ ದೂರಿನ ಮೇಲೆ ಇಂದಿರಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


