ಕಾರಾಗೃಹದ ಕೈದಿಗಳಿಗೆ ಮೊಬೈಲ್ ಪೂರೈಸಲು ಯತ್ನಿಸಿದ ಆರೋಪದ ಮೇರೆಗೆ ಕಾರಾಗೃಹದ ಇಬ್ಬರು ಹೊರಗುತ್ತಿಗೆ ಮನಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಕಾರಾಗೃಹದ ಕೈದಿಗಳಿಗೆ ಮೊಬೈಲ್ ಪೂರೈಸಲು ಯತ್ನಿಸಿದ ಆರೋಪದ ಮೇರೆಗೆ ಕಾರಾಗೃಹದ ಇಬ್ಬರು ಹೊರಗುತ್ತಿಗೆ ಮನಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿಯ ನವ್ಯ ಶ್ರೀ ಹಾಗೂ ಸೃಜನ್ ಬಂಧಿತರಾಗಿದ್ದು, ಆರೋಪಿಗಳಿಂದ ಒಂದು ಹೊಸ ಮೊಬೈಲ್ ಜಪ್ತಿ ಮಾಡಲಾಗಿದೆ.

ಜೈಲಿನ ಮುಖ್ಯ ಪ್ರವೇಶ ದ್ವಾರದಲ್ಲಿ ಶುಕ್ರವಾರ ತಪಾಸಣೆ ವೇಳೆ ನವ್ಯಶ್ರೀ ಅ‍ವರು ಒಳ ಉಡುಪಿನಲ್ಲಿಟ್ಟಿದ್ದ ಹೊಸ ಮೊಬೈಲ್ ಪತ್ತೆಯಾಗಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಕಾರಾಗೃಹದ ಭದ್ರತಾ ಸಿಬ್ಬಂದಿ ಒಪ್ಪಿಸಿದ್ದಾರೆ. ನಂತರ ನವ್ಯಶ್ರೀ ಅವರನ್ನು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಸಾಗಾಣಿಕೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಸ್‌ಡಬ್ಲ್ಯು ಪದವೀಧರರು

ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವೀಧರರಾದ ನವ್ಯ ಹಾಗೂ ಸೃಜನ್‌ ಅವರು, ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮನಶಾಸ್ತ್ರಜ್ಞರಾಗಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿದ್ದರು. ಅಪರಾಧ ಆರೋಪ ಜೈಲಿನಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಮನಪರಿವರ್ತನೆಗೆ ಇಬ್ಬರು ಕೆಲಸ ಮಾಡುತ್ತಿದ್ದರು. ಆದರೆ ಹಣದಾಸೆಗೆ ಬಿದ್ದು ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಸಾಗಿಸಲು ಯತ್ನಿಸಿ ಈಗ ಅದೇ ಜೈಲಿನಲ್ಲಿ ಅವರು ಮುದ್ದೆ ಮುರಿಯುವಂತಾಗಿದೆ.

ಹೊಸ ಮೊಬೈಲ್ ಖರೀದಿಸಿ ನವ್ಯ ಅವರಿಗೆ ಸೃಜನ್ ಕೊಟ್ಟಿದ್ದ. ಆ ಮೊಬೈಲ್‌ ಅನ್ನು ಒಳ ಉಡುಪಿನಲ್ಲಿಟ್ಟುಕೊಂಡು ಎಂದಿನಂತೆ ಶುಕ್ರವಾರ ಆಕೆ ಕೆಲಸಕ್ಕೆ ಬಂದಿದ್ದಾಳೆ. ಆಗ ಜೈಲಿನ ಮುಖ್ಯ ಪ್ರವೇಶ ದ್ವಾರದ ಬಳಿ ಆಕೆಯನ್ನು ಪರಿಶೀಲಿಸಿದಾಗ ಮೊಬೈಲ್ ಪತ್ತೆಯಾಗಿದೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾರಾಗೃಹದ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಅದರನ್ವಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • -ಮಾರತ್ತಹಳ್ಳಿಯ ನವ್ಯಶ್ರೀ, ಸೃಜನ್ ಬಂಧಿತರು, 1 ಹೊಸ ಮೊಬೈಲ್ ಜಪ್ತಿ
  • ಬಂಧಿತರು ಕೈದಿಗಳ ಮನಪರಿವರ್ತಿಸುವ ಕೆಲಸ ಮಾಡ್ತಿದ್ದರು
  • ಆದರೆ ಹಣದಾಸೆಗೆ ಬಿದ್ದು ಮೊಬೈಲ್ ಪೂರೈಸಲೆತ್ನಿಸಿದ್ದರು
  •  ಮನಶಾಸ್ತ್ರಜ್ಞರಾಗಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ
  • ಸೃಜನ್‌ ಹೊಸ ಮೊಬೈಲ್ ಖರೀದಿಸಿ ನವ್ಯಗೆ ಕೊಟ್ಟಿದ್ದ
  • ಆಕೆ ಅದನ್ನು ಒಳಉಡುಪಲ್ಲಿಟ್ಟುಕೊಂಡು ಬಂದು ಸಿಕ್ಕಿಬಿದ್ದಳು