ಐಟಿ ದೈತ್ಯ ಇನ್ಫೋಸಿಸ್ ಮತ್ತು ಎಐ ಕಂಪನಿ ಆ್ಯಂಥ್ರೋಪಿಕ್‌ ಜಂಟಿಯಾಗಿ ಎಐ ಸೇವೆಗಳನ್ನು ಒದಗಿಸಲು ಮೈತ್ರಿ ಮಾಡಿಕೊಂಡಿವೆ. ಈ ಒಪ್ಪಂದದ ಭಾಗವಾಗಿ, ಆ್ಯಂಥ್ರೋಪಿಕ್‌ ತನ್ನ ಮೊದಲ ಭಾರತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದಿದೆ  .

ನವದೆಹಲಿ: ಟೆಕ್ಕಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಹುಟ್ಟಿಸಿರುವ ಆ್ಯಂಥ್ರೋಪಿಕ್‌ ಕಂಪನಿ ಜತೆ ಕರ್ನಾಟಕದ ಐಟಿ ದೈತ್ಯ ಕಂಪನಿ ಇನ್ಫೋಸಿಸ್‌ ಮೈತ್ರಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇವು ಜಂಟಿಯಾಗಿ ಎಐ ಸೇವೆಯನ್ನು ಒದಗಿಸಲಿವೆ. ಸದ್ಯ ಟೆಲಿಕಾಂ ಕ್ಷೇತ್ರದಲ್ಲಷ್ಟೇ ಈ ಒಪ್ಪಂದವಾಗಿದ್ದು, ಆ್ಯಂಥ್ರೋಪಿಕ್‌ ತನ್ನ ಎಐ ಟೂಲ್‌ ಅಭಿವೃದ್ಧಿಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಘಾಟನೆಯಾದ ಕಚೇರಿಯಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಿದೆ ಎಂದು ಮಂಗಳವಾರ ಸ್ಟಾಕ್‌ ಎಕ್ಸ್‌ಚೇಂಜ್ ಫೈಲಿಂಗ್‌ ವೇಳೆ ಇನ್ಫೋಸಿಸ್‌ ಮಾಹಿತಿ ನೀಡಿದೆ.

ಮುಂದಿನ ದಿನಗಳಲ್ಲಿ ಈ ಪಾಲುದಾರಿಕೆ ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ. ಹೊಸ ಒಪ್ಪಂದದಡಿಯಲ್ಲಿ ಆ್ಯಂಥ್ರೋಪಿಕ್‌ನ ಕ್ಲಾಡ್‌ ಎಐ ಮತ್ತು ಇನ್ಫೋಸಿಸ್‌ನ ಟೊಪಾಜ್‌ ಸೇರಿಕೊಂಡು ಸಂಸ್ಥೆಯ ಕ್ಲೇಂ ಪ್ರಕ್ರಿಯೆ, ಕೋಡ್ ರಚನೆ, ಪರೀಕ್ಷೆ, ವಿಮರ್ಶೆಯಂತಹ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲಿವೆ.

ಬೆಂಗಳೂರು ಆಯ್ಕೆ ಏಕೆ?

ಆ್ಯಂಥ್ರೋಪಿಕ್‌ ಕಂಪನಿ, ಬೆಂಗಳೂರಿನಲ್ಲಿ ತನ್ನ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿದೆ. ಇದು ಭಾರತದ ಮೊದಲ ಹಾಗೂ ಏಷ್ಯಾ ಖಂಡದಲ್ಲಿರುವ ಆ್ಯಂಥ್ರೋಪಿಕ್‌ನ 3ನೇ ಆಫಿಸ್‌ ಎನಿಸಿಕೊಂಡಿದೆ. ಉಳಿದೆರಡು ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿವೆ. ಕಂಪನಿಯ ಕೃತಕ ಬುದ್ಧಿಮತ್ತೆ ಟೂಲ್‌ ಕ್ಲಾಡ್‌ ಎಐಗೆ ಭಾರತ 2ನೇ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಿರುವಾಗ ಇಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಕಚೇರಿ ಸ್ಥಾಪಿಸಿದ್ದು, ಅದಕ್ಕೆ ಸಿಲಿಕಾನ್‌ ವ್ಯಾಲಿ ಬೆಂಗಳೂರನ್ನು ಆಯ್ಕೆ ಮಾಡಿದೆ.

ನಾನು ಬೆಂಗಳೂರಲ್ಲಿ ಬೆಳೆದವ: ಆ್ಯಂಥ್ರೋಪಿಕ್‌ ಸಿಟಿಒ ಪಾಟೀಲ್‌

ಇಲ್ಲಿ ದೇಶದ ಮೊದಲ ಆ್ಯಂಥ್ರೋಪಿಕ್‌ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನವರಾದ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ರಾಹುಲ್‌ ಪಾಟೀಲ್‌ ತಮ್ಮ ಮೂಲವನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ: Bengaluru: ರಾಜಧಾನಿಗೆ ಬಂದ ಜಮ್ಕೋ: ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳಿಗೆ ಸುವರ್ಣವಕಾಶ

‘ಅಸಾಧ್ಯ ವಿಷಯಗಳು ಭಾರತದಲ್ಲಿ ಸಾಧ್ಯವಾಗುತ್ತವೆ. ನಾನು ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ. ನನ್ನ ತಾಯಿ ಕಂಪ್ಯೂಟರ್‌ ಸೈನ್ಸ್‌ ಶಿಕ್ಷಕಿಯಾಗಿದ್ದರು. ನಾನು ಬಾಲ್ಡ್ವಿನ್‌, ಜೋಸೆಫ್‌ ಮತ್ತು ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದೇನೆ. ನನ್ನ ಪತ್ನಿಯನ್ನು ಭೇಟಿಯಾಗಿದ್ದು ಕೂಡ ಇದೇ ವಿವಿಯಲ್ಲಿ ಎಂಜಿನಿಯರಿಂಗ್‌ ಮಾಡುತ್ತಿದ್ದಾಗ’ ಎಂದು ಪಾಟೀಲ್‌ ಹೇಳಿದ್ದಾರೆ

ಇದನ್ನೂ ಓದಿ: ಅಮೆರಿಕದ ದೈತ್ಯ ಆ್ಯಂಥ್ರೋಪಿಕ್‌ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್‌ ನೀಡಿದ ನ್ಯಾಯಾಲಯ