EPFO 3.0 ಪೋರ್ಟಲ್ ಜೂನ್ 2025 ರಲ್ಲಿ ಬಿಡುಗಡೆಯಾಗಲಿದ್ದು, ATM ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ, ಆಟೋ-ಕ್ಲೈಮ್ ಸೆಟಲ್‌ಮೆಂಟ್ ಮತ್ತು OTP ಆಧಾರಿತ ದೃಢೀಕರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಅಟಲ್ ಪಿಂಚಣಿ ಯೋಜನೆ ಮತ್ತು ಪಿಎಂಜೆಜೆಬಿವೈ ಸೇರಿದಂತೆ ಇತರ ಯೋಜನೆಗಳೊಂದಿಗೆ ಏಕೀಕರಣಗೊಳ್ಳಲಿದೆ.
ಭಾರತ ಸರ್ಕಾರದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಡಿಜಿಟಲ್ ರೂಪದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯನ್ನು ಇಡಲಾಗುತ್ತಿದೆ. ಕರ್ಮಚಾರಿ ಭವಿಷ್ಯ ನಿಧಿ ಸಂಘಟನೆಯು (Employees Provident Fund Organisation-EPFO) ಜೂನ್ 2025 ರಲ್ಲಿ EPFO 3.0 ಪೋರ್ಟಲ್ ಬಿಡುಗಡೆ ಮಾಡಲಿದೆ. ಇದು ಭವಿಷ್ಯ ನಿಧಿ (PF) ಖಾತೆದಾರರಿಗೆ ವೇಗದ, ಸುರಕ್ಷಿತ ಮತ್ತು ಪಾರದರ್ಶಕ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ATM ಮತ್ತು OTPಯಂತಹ ಆಧುನಿಕ ಸಾಧನಗಳ ಮೂಲಕ ಪಿಎಫ್ ಹಣಕಾಸಿನ ವ್ಯವಹಾರ ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಎಟಿಎಂನಿಂದ ಪಿಎಫ್ ಹಣ ಹಿಂಪಡೆಯುವ ಸೌಲಭ್ಯ
ಮುಖ್ಯವಾಗಿ EPFO 3.0ರ ದೊಡ್ಡ ವೈಶಿಷ್ಟ್ಯವೆಂದರೆ ಪಿಎಫ್ ಖಾತೆದಾರರು ಈಗ ATM ಮೂಲಕ ತಮ್ಮ PF ಹಣವನ್ನು ಹಿಂಪಡೆಯಬಹುದು. ನೀವು ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯುವಂತೆಯೇ, EPFO ನಿಂದ ನೇರವಾಗಿ ATM ಮೂಲಕ ಹಣವನ್ನು ಹಿಂಪಡೆಯಬಹುದು. ಕ್ಲೈಮ್ ಅನುಮೋದನೆ ಮತ್ತು ಇತ್ಯರ್ಥದ ನಂತರ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುತ್ತದೆ.
ಆಟೋ-ಕ್ಲೈಮ್ ಸೆಟಲ್‌ಮೆಂಟ್
ಭವಿಷ್ಯ ನಿಧಿ ಹಣವನ್ನು ಪಡೆಯುವ ಅರ್ಜಿಯನ್ನು ಅನುಮೋದಿಸುವ ಮತ್ತು ಪಾವತಿಸುವ ಪ್ರಕ್ರಿಯೆಯು ಈಗ ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ. ಇದರಿಂದಾಗಿ ಕ್ಲೈಮ್ ಪ್ರಕ್ರಿಯೆಗೆ ತಗಲುವ ಸಮಯ ಕಡಿಮೆಯಾಗುತ್ತದೆ. ಜೊತೆಗೆ ಪಿಎಫ್ ಖಾತೆದಾರರಿಗೆ ಹಣ ಬೇಗನೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. EPFO 3.0 ಮೂಲಕ ಹೆಸರು, ಜನ್ಮ ದಿನಾಂಕ ಮತ್ತು ಇತರ ವೈಯಕ್ತಿಕ ವಿವರಗಳನ್ನು OTP ಆಧಾರಿತ ದೃಢೀಕರಣದ ಮೂಲಕ ಡಿಜಿಟಲ್ ರೂಪದಲ್ಲಿ ನವೀಕರಿಸಬಹುದು. ಫಾರ್ಮ್ ಭರ್ತಿ ಮಾಡುವ ಮತ್ತು ಕಚೇರಿಗೆ ಹೋಗುವ ಸಂದರ್ಭವೇ ಬರುವುದಿಲ್ಲ.
ದೂರು ನಿವಾರಣಾ ವ್ಯವಸ್ಥೆ
ಹೊಸ ವೇದಿಕೆಯಲ್ಲಿ ದೂರು ನಿವಾರಣಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ. ಇದರಿಂದಾಗಿ ಉದ್ಯೋಗಿಗಳ ಸಮಸ್ಯೆಗಳನ್ನು ತ್ವರಿತವಾಗಿ ಮತ್ತು ಟ್ರ್ಯಾಕಿಂಗ್‌ನೊಂದಿಗೆ ಪರಿಹರಿಸಬಹುದು.
ಸಾಮಾಜಿಕ ಭದ್ರತೆಯ ಹಲವು ಯೋಜನೆಗಳ ಏಕೀಕರಣ:
EPFO 3.0 ಕೇವಲ PFಗೆ ಸೀಮಿತವಾಗಿರದೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಶ್ರಮಿಕ್ ಜನ್ ಧನ್ ಯೋಜನೆಯಂತಹ ಇತರ ಸರ್ಕಾರಿ ಯೋಜನೆಗಳಿಗೂ ಲಿಂಕ್ ಮಾಡಲಾಗುತ್ತದೆ. ಏಕೀಕೃತ ಸಾಮಾಜಿಕ ಭದ್ರತಾ ಚೌಕಟ್ಟನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ. ಇದಲ್ಲದೆ, ನೌಕರರ ರಾಜ್ಯ ವಿಮಾ ನಿಗಮ (ESIC) ತನ್ನ 165 ಆಸ್ಪತ್ರೆಗಳ ಜಾಲದ ಮೂಲಕ ಸುಮಾರು 18 ಕೋಟಿ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈಗ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಸೇರಿಸಲಾಗುತ್ತಿದೆ. ಇದರಲ್ಲಿ ಸರ್ಕಾರಿ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳು ಸಹ ಸೇರಿವೆ.


