ಗೂಗಲ್ ಪೇ ಮೂಲಕ ಈಗ 30 ಸಾವಿರದಿಂದ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು.  ಡಿಜಿಟಲ್ ಪ್ರಕ್ರಿಯೆಯ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ, ಕೆವೈಸಿ ದಾಖಲೆ ಅಪ್ಲೋಡ್ ಮಾಡಿ ಸಾಲ ಪಡೆಯಬಹುದು. ಮಾಸಿಕ ಇಎಂಐ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ.

ಡಿಜಿಟಲ್ ಪೇಮೆಂಟ್ (Digital Payment) ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ಹತ್ತು – ಇಪ್ಪತ್ತು ರೂಪಾಯಿ ಚೇಂಜ್ ಇಲ್ಲ ಅಂತ ಪರದಾಡ್ಬೇಕಾಗಿಲ್ಲ. ಲಕ್ಷಗಟ್ಟಲೆ ಕ್ಯಾಶ್ ಹಿಡಿದು ಓಡಾಡ್ಬೇಕಾಗಿಲ್ಲ. ಕೈನಲ್ಲೊಂದು ಮೊಬೈಲ್, ಡಿಜಿಟಲ್ ವ್ಯಾಲೆಟ್ (Digital wallet) ನಮ್ಮ ಹತ್ರ ಇದ್ರೆ ಸಾಕು. ಆರಾಮವಾಗಿ ನಾವು ಪೇಮೆಂಟ್ ಮಾಡ್ಬಹುದು. ಡಿಜಿಟಲ್ ವ್ಯಾಲೆಟ್ ಗಳು ಜನರನ್ನು ಆಕರ್ಷಿಸಲು ನಾನಾ ಪ್ಲಾನ್ ಜಾರಿಗೆ ತರ್ತಿವೆ. ಈಗ ಗೂಗಲ್ ಪೇ (GPay) ನಮಗೆ ಸಾಲ ಒದಗಿಸ್ತಿದೆ. ಮನೆಯಲ್ಲೇ ಕುಳಿತು, ಗೂಗಲ್ ಪೇ ಮೂಲಕ ನೀವು ಹತ್ತು ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು. 

ಗೂಗಲ್ ಪೇ ದೇಶದ ಹಲವು ಬ್ಯಾಂಕ್ಗಳ ಜೊತೆ ಒಪ್ಪಂದ ಮಾಡ್ಕೊಂಡಿದ್ದು, ಗ್ರಾಹಕರಿಗೆ ವೈಯಕ್ತಿಕ ಸಾಲ ಒದಗಿಸುತ್ತಿದೆ. ಬ್ಯಾಂಕ್ 30 ಸಾವಿರ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ತ್ವರಿತ ವೈಯಕ್ತಿಕ ಸಾಲ ನೀಡುತ್ತೆ. ಸಾಲದ ಅವಧಿ 6 ತಿಂಗಳಿಂದ 5 ವರ್ಷ. ನೀವು ಗೂಗಲ್ ಪೇನಿಂದ ಸಾಲ ಪಡೆಯಲು ಯೋಚಿಸ್ತಿದ್ರೆ, ಹೇಗೆ ಸಾಲಕ್ಕೆ ಅರ್ಜಿ ಸಲ್ಲಿಸ್ಬೇಕು, ಎಷ್ಟು ಬಡ್ಡಿ ಪಾವತಿಸ್ಬೇಕು, ಏನೆಲ್ಲ ದಾಖಲೆ ನಿಮಗೆ ಬೇಕು ಎನ್ನುವ ಮಾಹಿತಿ ಇಲ್ಲಿದೆ. 

ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ : ನೀವು ಗೂಗಲ್ ಪೇನಿಂದ ವೈಯಕ್ತಿಕ ಸಾಲ ಪಡೆಯಬೇಕು ಅಂದ್ರೆ ಶೇಕಡಾ 10.50 ರಿಂದ ಶೇಕಡಾ 15 ರವರೆಗೆ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಕ್ರೆಡಿಟ್ ಸ್ಕೋರ್ ಆಧರಿಸಿ ಬಡ್ಡಿದರವನ್ನು ನಿರ್ಧರಿಸಲಾಗುತ್ತದೆ. ಸಾಲ ಪಡೆಯುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಯಾವುದೇ ಕಾಗದವನ್ನು ಸಲ್ಲಿಸುವ ಅಗತ್ಯವಿಲ್ಲ. ಸಾಲ ಪಡೆಯುವ ವ್ಯಕ್ತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಅಲ್ಲದೆ ನಿಯಮಿತ ಆದಾಯದ ಮೂಲವನ್ನು ಹೊಂದಿರುವುದು ಮುಖ್ಯ. ನಿಮ್ಮ ಬ್ಯಾಂಕ್ ಖಾತೆಯಿಂದ ಇಎಂಐ ಪಾವತಿಯನ್ನು ಕಡಿತಗೊಳಿಸಲಾಗುತ್ತದೆ.

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ? : ಮೊದಲು ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ. ಮನಿ ಟ್ಯಾಬ್ಗೆ ಹೋಗಿ. ಸಾಲ ವಿಭಾಗದಲ್ಲಿ ಲಭ್ಯವಿರುವ ಸಾಲವನ್ನು ಪರಿಶೀಲಿಸಿ. ನಿಮಗೆ ಅಗತ್ಯವಿರುವ ಸಾಲದ ಟ್ಯಾಪ್ ಮೇಲೆ ಕ್ಲಿಕ್ ಮಾಡಿ ಸೂಚನೆಗಳನ್ನು ಅನುಸರಿಸಿ. ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಸಾಲ ಒಪ್ಪಂದಗಳಿಗೆ ಇ-ಸಹಿ ಮಾಡಿ. ಇದಕ್ಕೆ ನೀವು ತುಂಬಾ ಸಮಯ ಕಾಯ್ಬೇಕಾಗಿಲ್ಲ. ಸಾಲ ಪಡೆಯುವ ಎಲ್ಲ ಅರ್ಹತೆ ಹೊಂದಿದ್ದರೆ ಬ್ಯಾಂಕ್ ನಿಮಗೆ ಸಾಲ ಮಂಜೂರಿ ಮಾಡುತ್ತದೆ. ಸಾಲ ಅನುಮೋದನೆ ನಂತ್ರ ಮೊತ್ತ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಸಾಲ ಮರುಪಾವತಿ ಪ್ರಕ್ರಿಯೆ : ಗೂಗಲ್ ಪೇ ಮೂಲಕ ಪಡೆಯುವ ಸಾಲದ ಮಾಸಿಕ ಇಎಂಐ, ನೀವು ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ನೇರವಾಗಿ ಕಟ್ ಆಗುತ್ತೆ. ಬ್ಯಾಂಕ್ ಖಾತೆಯಲ್ಲಿ ನೀವು ಹಣ ಇರುವಂತೆ ನೋಡಿಕೊಳ್ಬೇಕು. ಇಎಂಐ ಕಡಿತದ ಟೈಂನಲ್ಲಿ ನಿಮ್ಮ ಖಾತೆಯಲ್ಲಿ ಹಣವಿಲ್ಲದೆ ಹೋದ್ರೆ ಅಥವಾ ಇಎಂಐ ಮೊತ್ತಕ್ಕಿಂತ ಕಡಿಮೆ ಹಣವಿದ್ದರೆ ದಂಡ ಕಟ್ಟಬೇಕಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಟೈಂನಲ್ಲಿ ನಿಮಗೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಯಾವಾಗಿನಿಂದ ನಿಮ್ಮ ಸಾಲ ಮರುಪಾವತಿ ಆರಂಭವಾಗುತ್ತೆ, ಎಷ್ಟು ವರ್ಷ, ಇಎಂಐ ಪಾವತಿಗೆ ಕೊನೆ ದಿನಾಂಕ ಯಾವುದು, ಪ್ರತಿ ತಿಂಗಳು ಎಷ್ಟು ಇಎಂಐ ಕಡಿತವಾಗುತ್ತೆ ಎನ್ನುವ ಮಾಹಿತಿ ಸಿಗುತ್ತದೆ.