ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.6 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿ 1.5 ಗಿಗಾವ್ಯಾಟ್ ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ಗೂಗಲ್ ಯೋಜನೆಯನ್ನೂ ಮೀರಿಸುವ ಈ ಕೇಂದ್ರವು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಆಗಲಿದೆ.
ವಿಶಾಖಪಟ್ಟಣಂ (ಏ.28): ದಕ್ಷಿಣ ಭಾರತದಲ್ಲಿ ತಂತ್ರಜ್ಞಾನ ಕ್ರಾಂತಿ ಮೂಡಿಸಲು ಸಜ್ಜಾಗಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.5 ಗಿಗಾವ್ಯಾಟ್ (GW) ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ. ಗೂಗಲ್ ಸಂಸ್ಥೆಯ 1.4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್‌ಗಿಂತಲೂ ದೊಡ್ಡದಾದ ಈ ಯೋಜನೆಗೆ ರಿಲಯನ್ಸ್ 1.6 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ಸೌರ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿರುವ ಈ ಡೇಟಾ ಸೆಂಟರ್ ಕ್ಲಸ್ಟರ್ ಪೂರ್ಣಗೊಂಡಾಗ, ಇದು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಕುತೂಹಲಕಾರಿ ವಿಷಯವೆಂದರೆ, ಗೂಗಲ್ ಕೂಡ ಇಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಸ್ಥಾಪಿಸುವುದಾಗಿ ಘೋಷಿಸಿದೆ.
ಮೂರು ಹಂತಗಳಲ್ಲಿ ಅನುಷ್ಠಾನ
ಒಟ್ಟು 935 ಎಕರೆ ವಿಸ್ತೀರ್ಣದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೂರು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. 300 ಎಕರೆ ಪ್ರದೇಶದಲ್ಲಿ 500 ಮೆಗಾವ್ಯಾಟ್ (MW) ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಾಣವಾಗಲಿದೆ. ಇದು 2028ರ ಅಂತ್ಯದ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ನಂತರದ ಹಂತದಲ್ಲಿ 600 ಎಕರೆ ಭೂಮಿಯಲ್ಲಿ ಹೆಚ್ಚುವರಿ 1 ಗಿಗಾವ್ಯಾಟ್ ಸಾಮರ್ಥ್ಯವನ್ನು ಸೇರಿಸಲಾಗುತ್ತದೆ. ಈ ಬೃಹತ್ ಕೇಂದ್ರವು ವಿಶಾಖಪಟ್ಟಣಂನ ಹೊಸ ಭೋಗಾಪುರಂ ವಿಮಾನ ನಿಲ್ದಾಣದ ಸಮೀಪ ತಲೆ ಎತ್ತಲಿದೆ.
ಡೇಟಾ ಸೆಂಟರ್ ಸಿಟಿಯಾಗಲಿರುವ ವಿಶಾಖಪಟ್ಟಣಂ
ರಿಲಯನ್ಸ್ ಮಾತ್ರವಲ್ಲದೆ ಹಲವು ದಿಗ್ಗಜ ಕಂಪನಿಗಳು ಇಲ್ಲಿ ಹೂಡಿಕೆಗೆ ಮುಂದೆ ಬಂದಿವೆ. ಗೂಗಲ್ ಇಲ್ಲಿ 15 ಬಿಲಿಯನ್ ಡಾಲರ್ (1.4 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. Zyphy 500 ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿದೆ. ಡಿಜಿಟಲ್ ಕನೆಕ್ಷನ್ ಇಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಲಿದೆ. ಆನಂದ್ ರಾಜ್ ಕ್ಲೌಡ್ 300 ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ನಿರ್ಮಾಣ ಮಾಡಲಿದೆ. ಆಂಧ್ರಪ್ರದೇಶ ಸರ್ಕಾರವು ಒಟ್ಟಾರೆಯಾಗಿ ರಾಜ್ಯದಲ್ಲಿ 6 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಕಂಪನಿಗಳಿಗೆ ರಿಯಾಯಿತಿ ಹಾಗೂ ಪ್ರೋತ್ಸಾಹಕಗಳನ್ನು ಘೋಷಿಸಿದೆ.
ರಿಲಯನ್ಸ್ ಷೇರುಗಳಲ್ಲಿ ಜಿಗಿತ:
ಈ ಬೃಹತ್ ಯೋಜನೆಯ ಸುದ್ದಿ ಹೊರಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆ ಕಂಡಿವೆ. ಆರಂಭದಲ್ಲಿ ನಷ್ಟದಲ್ಲಿ ವ್ಯವಹಾರ ಆರಂಭಿಸಿದ್ದ ಷೇರುಗಳು, ದಿನದ ಅಂತ್ಯಕ್ಕೆ ಶೇ. 2ರಷ್ಟು ಲಾಭದೊಂದಿಗೆ ಪ್ರತಿ ಷೇರಿಗೆ 1,393 ರೂಪಾಯಿ ದರದಲ್ಲಿ ವಹಿವಾಟು ಮುಗಿಸಿವೆ.


