Romania viral car accident: ಚಾಲಕ ವಾಹನ ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ತಪ್ಪಿದ್ದರಿಂದ ಮರ್ಸಿಡಿಸ್ ಕಾರೊಂದು ವಿಮಾನದಂತೆ ಗಾಳಿಯಲ್ಲಿ ಹಾರಿದೆ. ಸಿಗ್ನಲ್‌ನಲ್ಲಿದ್ದ ಇತರ ವಾಹನಗಳ ಮೇಲಿಂದ ಹಾರಿಹೋದ ಕಾರು, ಪೆಟ್ರೋಲ್ ಬಂಕ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ವಿಮಾನದಂತೆ ಮೇಲೇರಿದ ಮರ್ಸಿಡಿಸ್ ಕಾರು:
ಬ್ಯುಸಿಯಾದ ರಸ್ತೆಯಲ್ಲಿ ವಾಹನ ಚಾಲನೆಯಲ್ಲಿದ್ದಾಗಲೇ ಚಾಲಕ ಪ್ರಜ್ಞಾಹೀನನಾಗಿದ್ದರಿಂದ ಮರ್ಸಿಡಿಸ್ ಕಾರೊಂದು ನೆಲದಿಂದ ಮೇಲೆ ವಿಮಾನ ಟೇಕಾಫ್ ಆದಂತೆ ಗಾಳಿಯಲ್ಲಿ ಹಾರಿದ ಘಟನೆ ನಡೆದಿದೆ. ಈ ಅವಘದಲ್ಲಿ ಕಾರಿಗೆ ಹಾನಿಯಾಗಿದೆ. ಅದರೆ ರಸ್ತೆಯಲ್ಲಿದ್ದ ಬೇರೆಲ್ಲಾ ವಾಹನಗಳು, ವಾಹನ ಸವಾರರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಘಟನೆಯ ದೃಶ್ಯಾವಳಿ ಈಗ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೊಂದು ವಿಚಿತ್ರವೆನಿಸಿದ ಘಟನೆ ನಡೆದಿರುವುದು ರೋಮೇನಿಯಾ ದೇಶದಲ್ಲಿ . ಅತೀ ವೇಗದಲ್ಲಿ ಇದ್ದ ಈ ಮರ್ಸಿಡಿಸ್ ಕಾರು ಏರ್ ಮರ್ಸಿಡಿಸ್ ಕಾರು ಎನಿಸಿದೆ. ಡಿಸೆಂಬರ್ 3 ರಂದು ರೊಮೇನಿಯಾದ ಒರ್ಡಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸುಮಾರು 6 ಅಡಿ ಎತ್ತರದಲ್ಲಿ ಹಾರಿದ ಕಾರು
ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಮಾಧ್ಯಮ ಯುರೋ ವೀಕ್ಲಿ ನ್ಯೂಸ್ ವರದಿ ಮಾಡಿದ್ದು, ಇದ್ದಕ್ಕಿದಂತೆ ಸುಮಾರು 6 ಅಡಿ ಎತ್ತರದಲ್ಲಿ ಹಾರಿದ ಕಾರು ನಂತರ ಪೆಟ್ರೋಲ್ ಬಂಕ್ ಸಮೀಪದ ಲೋಹದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ಮಾಹಿತಿ ನೀಡಿದೆ.
ವೈರಲ್ ಆದ ವೀಡಿಯೋದಲ್ಲಿ ಅತಿ ವೇಗದಲ್ಲಿದ್ದ ಮರ್ಸಿಡಿಸ್ ಕಾರು ರಾಂಗ್ ರೂಟ್‌ನಲ್ಲಿ ಬಂದು ವೃತ್ತವನ್ನು ಪ್ರವೇಶಿಸಿ ಬಳಿಕ ರಸ್ತೆ ನಿಯಂತ್ರಣ ರೇಖೆಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಲವಾರು ಅಡಿಗಳಷ್ಟು ಎತ್ತರದಲ್ಲಿ ಹಾರಿದೆ. ಸಿಗ್ನಲ್‌ನಲ್ಲಿ ಕಾಯುತ್ತಿದ್ದ ಕಾರುಗಳ ಮೇಲೆ ಈ ಮರ್ಸಿಡಿಸ್ ಕಾರು ಹಾರಿ ಹೋಗಿದ್ದು, ಅಂತಿಮವಾಗಿ ಪೆಟ್ರೋಲ್ ಬಂಕ್‌ಗೆ ಕೆಲವೇ ಮೀಟರ್ ದೂರದಲ್ಲಿರುವ ಲೋಹದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದಾಗಿ ದೊಡ್ಡ ಸ್ಫೋಟವೊಂದು ತಪ್ಪಿದೆ. ಒಂದು ವೇಳೆ ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ಗಾಡಿ ಚಲಾಯಿಸುತ್ತಿದ್ದಾಗಲೇ ಚಾಲಕ ಮೂರ್ಛೆ ಹೋಗಿದ್ದರಿಂದ ದುರಂತ:
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, 55 ವರ್ಷದ ಚಾಲಕನಿಗೆ ತೀವ್ರ ಮಧುಮೇಹ ಸಮಸ್ಯೆ ಇದ್ದು, ಇದರಿಂದಾಗಿ ಅವನು ಗಾಡಿ ಚಲಾಯಿಸುತ್ತಿದ್ದಾಗಲೇ ಮೂರ್ಛೆ ಹೋಗಿದ್ದಾನೆ ಎಂದು ನಂತರ ಪೊಲೀಸರು ದೃಢಪಡಿಸಿದ್ದಾರೆ. ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡ ಅವರು ಕಾರು ಗಾಳಿಯಲ್ಲಿ ಚಲಿಸುವ ಮೊದಲು ಅತಿ ವೇಗದಲ್ಲಿ ಜಂಕ್ಷನ್‌ಗೆ ಡಿಕ್ಕಿ ಹೊಡೆದರು. ಗಾಳಿಯಲ್ಲಿ ಹಾರಿದ ವಾಹನವೂ ಕೆಳಗೆ ಇಳಿಯುತ್ತಿದ್ದಂತೆ ಗುಡುಗಿನಂತಹ ಸದ್ದು ಕೇಳಿಸಿತು ಎಂದು ಹತ್ತಿರದ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಹೇಳಿದ್ದಾರೆ.
ಇದನ್ನೂ ಓದಿ: ಪಬ್ಬಲ್ಲಿ ಮೊಬೈಲ್ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಬಂದ ತುರ್ತು ಸಿಬ್ಬಂದಿ ಚಾಲಕನನ್ನು ವಾಹನಗಳ ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರಿಗೆ ದೇಹದ ಹಲವು ಭಾಗಗಳಲ್ಲಿ ಹಾನಿಯಾಗಿದೆ. ಅದರೆ ಮಾರಣಾಂತಿಕ ಗಾಯ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಅನೇಕರು ಆತ ಬದುಕುಳಿದಿರುವುದೇ ಪವಾಡ ಎಂದಿದ್ದಾರೆ. ಘಟನೆಯ ಹಿನ್ನೆಲೆ ಅಧಿಕಾರಿಗಳು ಅವರ ಪರವಾನಗಿಯನ್ನು 90 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ ಮತ್ತು 1,600 ರೊಮೇನಿಯನ್ ಲ್ಯೂ (ಸುಮಾರು 27,000 ರೂ.) ದಂಡ ವಿಧಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!


