'ಕಾಂತಾರ ಚಾಪ್ಟರ್–1' ಸಿನಿಮಾದಲ್ಲಿ ಚಾಮುಂಡಿ ದೈವಕ್ಕೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ್ದಾರೆ. ನ್ಯಾಯಾಲಯವು ಅವರ ಕ್ಷಮಾಪಣೆಯನ್ನು ಸ್ವೀಕರಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದ್ದು, ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾಂತಾರ ಚಾಪ್ಟರ್–1 ಸಿನಿಮಾದಲ್ಲಿ ಚಾಮುಂಡಿ ದೈವಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಪರಿಷ್ಕೃತ ಕ್ಷಮಾಪಣೆಯ ಅಫಿಡವಿಟ್ ಸಲ್ಲಿಸಿ, ಬೇಷರತ್ ಕ್ಷಮೆ ಕೋರಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ಈ ವೇಳೆ ರಣವೀರ್ ಸಿಂಗ್ ಪರ ವಕೀಲರು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚನೆ ಮಾಡಲು ನಟ ಸಿದ್ಧರಾಗಿದ್ದಾರೆ. ಆದರೆ ಭದ್ರತಾ ಕಾರಣಗಳಿಂದ ತಕ್ಷಣ ದಿನಾಂಕ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರರ ಪರ ವಕೀಲರು, ಕರ್ನಾಟಕ ಪೊಲೀಸರು ಸಾಕಷ್ಟು ಶಕ್ತಿಯುತವಾಗಿದ್ದು ಭದ್ರತೆ ಒದಗಿಸಲು ಸಾಧ್ಯವಿದೆ ಎಂದು ವಾದ ಮಂಡಿಸಿದರು.
ಕರ್ನಾಟಕ ಪೊಲೀಸರ ಬಗ್ಗೆ ಕೋರ್ಟ್ ಅಸಮಾಧಾನ
ಆದರೆ ದೂರುದಾರರ ವಕೀಲರ ಈ ಹೇಳಿಕೆಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. “ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ನಾವು ನೋಡುತ್ತಿದ್ದೇವೆ. ಅನಾವಶ್ಯಕ ವಿಚಾರಗಳ ಹಿಂದೆ ಪೊಲೀಸರು ಹೋಗುತ್ತಿದ್ದು, ನೈಜ ತನಿಖೆ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಇದೇ ವೇಳೆ, ರಣವೀರ್ ಸಿಂಗ್ ಜವಾಬ್ದಾರಿಯುತ ವ್ಯಕ್ತಿ. ಅವರು ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂದು ನ್ಯಾಯಪೀಠ ಸೂಚನೆ ನೀಡಿತು. ಬಳಿಕ ರಣವೀರ್ ಸಿಂಗ್ ಸಲ್ಲಿಸಿದ್ದ ಪರಿಷ್ಕೃತ ಪ್ರಮಾಣಪತ್ರವನ್ನು ಸ್ವೀಕರಿಸಿ, ಅರ್ಜಿಯನ್ನು ಇತ್ಯರ್ಥಪಡಿಸಲಾಯಿತು.
ಇನ್ನೊಂದೆಡೆ, ರಾಜ್ಯ ಸರಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಜಗದೀಶ್, ರಣವೀರ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮುಂಚಿತವಾಗಿ ಮಾಹಿತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಶೀಘ್ರದಲ್ಲೇ ರಣವೀರ್ ಚಾಮುಂಡಿ ಬೆಟ್ಟಕ್ಕೆ ಭೇಟಿ
ಈ ಕುರಿತು ದೂರುದಾರರ ಪರ ವಕೀಲ ಪ್ರಶಾಂತ್ ಮಿತ್ತಲ್ ಪ್ರತಿಕ್ರಿಯಿಸಿ, ಪ್ರಕರಣವನ್ನು ಹೈಕೋರ್ಟ್ ಇತ್ಯರ್ಥಪಡಿಸಿದ್ದು, ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಭದ್ರತಾ ಕಾರಣಗಳಿಂದ ಭೇಟಿ ದಿನಾಂಕ ನಿಗದಿಯಾಗದಿದ್ದರೂ, ಶೀಘ್ರದಲ್ಲೇ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕ್ಷಮಾಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿಯನ್ನು ಮುಕ್ತಾಯಗೊಳಿಸಿದ್ದು, ಭವಿಷ್ಯದಲ್ಲಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚನೆ ಮಾಡುವ ಸಾಧ್ಯತೆ ಇದೆ.


