ನೋಡಲು ಥೇಟ್ ಐಶ್ವರ್ಯಾ ರೈ ಅವರಂತೆಯೇ ಇದ್ದ ನಟಿ ಸ್ನೇಹಾ ಉಳ್ಳಾಲ್, 'ಲಕ್ಕಿ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಆದರೆ ಕೆಲವೇ ಯಶಸ್ವಿ ಚಿತ್ರಗಳನ್ನು ನೀಡಿದ ಸ್ನೇಹಾ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಹಾಗೇಕಾಯಿತು ಆಕೆಯ ಲೈಪು? 

ಪ್ರತಿ ವರ್ಷ ಸಿನಿಮಾ ಲೋಕಕ್ಕೆ ಹೊಸ ಹೊಸ ಸುಂದರಿಯರು ಎಂಟ್ರಿ ಕೊಡ್ತಾರೆ. ತಮ್ಮ ಸೌಂದರ್ಯದಿಂದ ಪ್ರೇಕ್ಷಕರ ಮನಸ್ಸು ಗೆಲ್ಲೋಕೆ ಪ್ರಯತ್ನಿಸ್ತಾರೆ. ಆದರೆ ಕೆಲವರು ಮಾತ್ರ ತುಂಬ ಗಾಢವಾಗಿ ಜನರಿಗೆ ಇಷ್ಟವಾಗ್ತಾರೆ, ವರ್ಷಗಳಾದ್ರೂ ಅವರ ಬಗ್ಗೆ ಮಾತು ನಿಲ್ಲಲ್ಲ. ಆದ್ರೆ ಕೆಲವರು ಮಾತ್ರ ಎಷ್ಟೇ ಬ್ಯೂಟಿ ಇದ್ರೂ ಕೆಲವೇ ವರ್ಷಗಳಲ್ಲಿ ಎಲ್ಲರ ನೆನಪಿನಿಂದ ಅಳಿಸಿ ಹೋಗ್ತಾರೆ. ಅಂಥ ಒಬ್ಬ ನಟಿಯ ಕಥೆ ಇದು. 17- 18 ವರ್ಷದ ವಯಸ್ಸಲ್ಲೇ ನಟಿಯಾಗಿ ಚಿತ್ರರಂಗಕ್ಕೆ ಬಂದವಳು, ಒಂದು ಕಾಲಕ್ಕೆ ಬಾಲಿವುಡ್‌ನ ಅತಿ ಸುಂದರ ನಟಿಯರಲ್ಲಿ ಒಬ್ಬಳು ಅಂತಲೇ ಕರೆಸಿಕೊಂಡವಳು ಈಕೆ.

ಈ ನಟಿಯ ಹೆಸರು ಸ್ನೇಹಾ ಉಳ್ಳಾಲ್. ನೋಡೋಕೆ ಥೇಟಾನುಥೇಟ್‌ ಐಶ್ವರ್ಯಾ ರೈ. ಆದರೆ ದೌರ್ಬಾಗ್ಯ ನೋಡಿ. ಜನ ಅವಳನ್ನ ಅವಳದೇ ಹೆಸರಿನಿಂದ ಕರೆಯೋ ಬದಲು ಐಶ್ವರ್ಯ ರೈ ಡುಪ್ಲಿಕೇಟ್ ಅಂತಲೇ ಹೆಚ್ಚು ನೆನಪಿಸಿಕೊಂಡರು. ಇಂದಿಗೂ ಅವಳ ಬಗ್ಗೆ ಮಾತಾಡಿದ್ರೆ, ಮೊದಲು ಬರೋದು “ಐಶ್ವರ್ಯ ರೈಗೆ ತುಂಬಾ ಹೋಲ್ತಾಳೆ” ಅನ್ನೋ ಮಾತೇ. ಅವಳ ಸೌಂದರ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಆದರೆ ಅಭಿನಯ ಮಾತ್ರ ಜನರ ಮನಸ್ಸಿಗೆ ಅಷ್ಟು ತಟ್ಟಲಿಲ್ಲ. ಹೀಗಾಗಿ ಕೆಲವೇ ವರ್ಷಗಳಲ್ಲಿ ಅವಳ ಸಿನಿಮಾ ಜೀವನ ಮಂಕಾಗಿ, ಫ್ಲಾಪ್ ನಟಿ ಅನ್ನೋ ಟ್ಯಾಗ್ ಅಂಟಿಬಿಟ್ಟಿತು.

ಸ್ನೇಹಾ ಸುಮಾರು 20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವರು. 2005ರಲ್ಲಿ ‘Lucky: No Time for Love’ ಅನ್ನೋ ಸಿನಿಮಾದ ಮೂಲಕ ಸ್ನೇಹಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಳು. ಈ ಚಿತ್ರದಲ್ಲಿ ಹೀರೋ ಆಗಿದ್ದವನು ಸಲ್ಮಾನ್ ಖಾನ್ ಇದ್ದರು. ಸಿನಿಮಾ ಬಿಡುಗಡೆಯಾದ ಕೂಡಲೇ, ಅವಳ ನೀಲಿ ಕಣ್ಣುಗಳು, ಮುಖಚಹರೆ ನೋಡಿ ಜನ “ಇವಳು ಐಶ್ವರ್ಯ ರೈನೇ ಅಲ್ಲವಾ?” ಅನ್ನೋ ಮಟ್ಟಿಗೆ ಮಾತಾಡಿದ್ರು. ಆರಂಭದಲ್ಲಿ ಈ ಹೋಲಿಕೆ ಅವಳಿಗೆ ತುಂಬಾ ಪಬ್ಲಿಸಿಟಿ ತಂದುಕೊಟ್ಟಿತು. ಆದರೆ ಕಾಲ ಹೋದಂತೆ, ಅದೇ ಅವಳಿಗೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿತು. “ಐಶ್ವರ್ಯನ ಡುಪ್ಲಿಕೇಟ್” ಅನ್ನೋ ಗುರುತು ಅವಳದೇ ವ್ಯಕ್ತಿತ್ವವನ್ನೇ ಮುಚ್ಚಿಹಾಕಿತು. ಸೌಂದರ್ಯ ಇದ್ದರೂ, ಅದರಿಂದ ಅವಳಿಗೆ ಲಾಭ ಆಗಲಿಲ್ಲ; ಬದಲಾಗಿ ಕರಿಯರ್‌ಗೆ ಹೊಡೆತವೇ ಬಿತ್ತು.

ಗಂಭೀರ ಕಾಯಿಲೆಯಿಂದ ಜೀವನ ಬದಲಾಯ್ತು

ಸ್ನೇಹಾ ಎಂಟ್ರಿ ಕೊಟ್ಟಾಗ ಅವಳ ಮುಖದಲ್ಲಿ ಒಂಥರಾ ಮುಗ್ಧತೆ ಇತ್ತು. ನೋಡಿದ್ರೆ ತಕ್ಷಣ ಐಶ್ವರ್ಯ ರೈ ಬಚ್ಚನ್ ನೆನಪಾಗ್ತಿದ್ರು. ಆದ್ರೂ ಬಾಲಿವುಡ್‌ನಲ್ಲಿ ಅವಳ ಸಿನಿಮಾ ಜೀವನ ಮುಂದೆ ಸಾಗಲಿಲ್ಲ. ಈ ನಡುವೆ ಇನ್ನೊಂದು ದೊಡ್ಡ ಆಘಾತ ಅವಳ ಜೀವನಕ್ಕೆ ಬಂತು. ಸ್ನೇಹಾ ರಕ್ತಕ್ಕೆ ಸಂಬಂಧಿಸಿದ ಆಟೋಇಮ್ಯೂನ್ ಕಾಯಿಲೆಗೆ ಒಳಗಾದಳು. ಈ ಕಾಯಿಲೆ ಅವಳ ರೋಗನಿರೋಧಕ ಶಕ್ತಿಯನ್ನೇ ಹಾಳುಮಾಡಿತು. ಅರ್ಧ ಗಂಟೆ ನಿಲ್ಲೋದಕ್ಕೂ ಕಷ್ಟವಾಗುವ ಸ್ಥಿತಿ ಬಂತು. ತೆಲುಗು ಸಿನಿಮಾ ‘ಅಂತ ನೀ ಮಾಯಲೋನ್’ ನಂತರ ಅವಳು ಹಠಾತ್ತನೆ ನಟನೆಯಿಂದ ದೂರ ಸರಿದಳು. ಶೂಟಿಂಗ್, ಕಾರ್ಯಕ್ರಮ ಎಲ್ಲ ನಿಲ್ಲಿಸಬೇಕಾಯಿತು.

‘ಲಕ್ಕಿ’ ನಂತರ ಸ್ನೇಹಾ ‘ಆರ್ಯನ್:‌ ದಿ ಅನ್‌ಬ್ರೇಕಬಲ್‌ʼ ಸಿನಿಮಾದಲ್ಲಿ ನಟಿಸಿದಳು. ಆದರೆ ಅದು ಭಾರೀ ಫ್ಲಾಪ್ ಆಯ್ತು. ಬಾಲಿವುಡ್‌ನಲ್ಲಿ ಹೆಸರು ಮಾಡೋಕೆ ಆಗದೆ ಅವಳು ದಕ್ಷಿಣ ಭಾರತಕ್ಕೆ ಮುಖಮಾಡಿದಳು. 2008ರಲ್ಲಿ ತೆಲುಗು ಸಿನಿಮಾ ‘ಉಲ್ಲಾಸಂಗ ಉತ್ಸಾವಂಗʼ ಮೂಲಕ ಸೌತ್‌ಗೆ ಎಂಟ್ರಿ ಕೊಟ್ಟಳು. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯ್ತು. ಸ್ನೇಹಾಳ ಅಭಿನಯಕ್ಕೂ ಮೆಚ್ಚುಗೆ ಸಿಕ್ಕಿತು. ನಂತರ ನಾಗಾರ್ಜುನ ಜೊತೆ ‘ಕಿಂಗ್’ ಸಿನಿಮಾದಲ್ಲೂ ನಟಿಸಿದಳು.

2010ರಲ್ಲಿ ಮತ್ತೆ ಬಾಲಿವುಡ್‌ಗೆ ಬಂದು ‘ಕಾಶ್‌... ಮೇರೆ ಹೋತೆ’ ಸಿನಿಮಾದಲ್ಲಿ ನಟಿಸಿದಳು. ಆದರೆ ಅದು ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಅದೇ ವರ್ಷ ನಂದಮೂರಿ ಬಾಲಕೃಷ್ಣ ಜೊತೆ ‘ಸಿಂಹʼ ಸಿನಿಮಾದಲ್ಲಿ ನಟಿಸಿ, ಅದು ಭರ್ಜರಿ ಹಿಟ್ ಆಯ್ತು.

ಸ್ನೇಹಾ ಕೊನೆ ಬಾರಿ 2022ರಲ್ಲಿ ಬಿಡುಗಡೆಯಾದ ‘ಲವ್‌ ಯು ಲೋಕತಂತ್ರ’ ಸಿನಿಮಾದಲ್ಲಿ ಕಾಣಿಸಿಕೊಂಡಳು. ಅದರ ನಂತರ ಇವತ್ತಿನವರೆಗೂ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಒಟ್ಟಿನಲ್ಲಿ, ಸ್ನೇಹಾ ಉಳ್ಳಾಲ್ ಬಗ್ಗೆ ನೋಡೋದಾದರೆ ಒಂದು ಮಾತಂತೂ ಹೇಳಬಹುದು- ಅತಿಯಾದ ಹೋಲಿಕೆ ಕೆಲವೊಮ್ಮೆ ವರವಾಗಿರಲ್ಲ, ಶಾಪವಾಗಿಬಿಡುತ್ತೆ. ಸೌಂದರ್ಯ ಇದ್ದರೂ, ಆರೋಗ್ಯ, ಅದೃಷ್ಟ ಮತ್ತು ಸರಿಯಾದ ಅವಕಾಶ ಇಲ್ಲದಿದ್ದರೆ ಸಿನಿಮಾ ಲೋಕ ಎಷ್ಟು ಕಠಿಣ ಅನ್ನೋದಕ್ಕೆ ಸ್ನೇಹಾ ಜೀವನವೇ ಉದಾಹರಣೆ.