ನಿಮ್ಮ ಬಟ್ಟೆ ಎಲ್ಲಿದೆ? ಏನನ್ನು ಧರಿಸುತ್ತೀರಿ?" ಎಂದು ಮಾಧುರಿ ಕೇಳಿದರು. ಅದಕ್ಕೆ ಹುಸೇನ್ ನಗುತ್ತಾ, "ನಾನು ಹಾಕಿಕೊಂಡಿರುವ ಶರ್ಟ್ ಮತ್ತು ಪ್ಯಾಂಟ್ ಅಷ್ಟೇ ನನ್ನ ಬಳಿ ಇರುವುದು. ಡೆನ್ವರ್‌ನಲ್ಲಿ ಚಳಿ ಇರುವ ಕಾರಣ ಒಳಗೆ ಪೈಜಾಮ ಹಾಕಿಕೊಂಡಿದ್ದೇನೆ," ಎಂದರಂತೆ.

ಎಂಎಫ್ ಹುಸೇನ್ ನೈಜ ಮುಖ ಹೇಳಿದ ಮಾಧುರಿ ದೀಕ್ಷಿತ್!

ಮುಂಬೈ: 90ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಸೌಂದರ್ಯದ ಖನಿ ಮಾಧುರಿ ದೀಕ್ಷಿತ್. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮಾಧುರಿ ದೀಕ್ಷಿತ್ (Madhuri Dixit), 1999ರಲ್ಲಿ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾಗಿ ಅಮೆರಿಕದ ಡೆನ್ವರ್‌ಗೆ ಹಾರಿದಾಗ ಲಕ್ಷಾಂತರ ಅಭಿಮಾನಿಗಳ ಹೃದಯ ಚೂರು ಚೂರಾಗಿತ್ತು. ಹೀಗೆ ಬೇಸರಗೊಂಡವರಲ್ಲಿ ಜಗದ್ವಿಖ್ಯಾತ ಚಿತ್ರಕಲಾವಿದ ಎಂ.ಎಫ್. ಹುಸೇನ್ (MF Husain) ಕೂಡ ಒಬ್ಬರು. ಮಾಧುರಿ ದೀಕ್ಷಿತ್ ಅವರನ್ನು ತಮ್ಮ 'ಮ್ಯೂಸ್' (ಸ್ಫೂರ್ತಿಯ ಸೆಲೆ) ಎಂದು ಪರಿಗಣಿಸಿದ್ದ ಹುಸೇನ್, ಮಾಧುರಿಯ ಮೇಲಿನ ಅಭಿಮಾನಕ್ಕಾಗಿ 'ಫಿದಾ' ಎಂಬ ಪದವನ್ನೇ ತಮ್ಮ ಸಹಿಯಾಗಿ ಬಳಸುತ್ತಿದ್ದರು.

ಮದುವೆಯ ನಂತರ ನಟನೆಯಿಂದ ದೂರ ಸರಿದು ಅಮೆರಿಕದಲ್ಲಿ ನೆಲೆಸಿದ್ದ ಮಾಧುರಿ ದೀಕ್ಷಿತ್ ಅವರನ್ನು ನೋಡಲು ಸ್ವತಃ ಎಂ.ಎಫ್. ಹುಸೇನ್ ಅವರೇ ಡೆನ್ವರ್‌ಗೆ ಹೋಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ನಡೆದ ತಮಾಷೆಯ ಹಾಗೂ ಭಾವನಾತ್ಮಕ ಘಟನೆಗಳನ್ನು ಮಾಧುರಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ.

ನಟಿಯಲ್ಲ, 'ತಾಯಿ'ಯನ್ನು ನೋಡಲು ಬಂದಿದ್ದೆ!

ಸಂದರ್ಶನದಲ್ಲಿ ಮಾತನಾಡಿದ ಮಾಧುರಿ, "ಹುಸೇನ್ ಸಾಬ್ ತುಂಬಾ ಪ್ರೀತಿಯ ವ್ಯಕ್ತಿತ್ವದವರು. ಅವರು ಡೆನ್ವರ್‌ನಲ್ಲಿರುವ ನನ್ನ ಮನೆಗೆ ಬಂದಾಗ ಒಂದು ಮಾತು ಹೇಳಿದರು. 'ನಾನು ನಿನ್ನನ್ನು ಯಾವಾಗಲೂ ನಟಿಯಾಗಿ ನೋಡಿದ್ದೇನೆ. ಆದರೆ ಈಗ ನಾನು ನಿನ್ನನ್ನು ತಾಯಿಯಾಗಿ ನೋಡಲು ಇಷ್ಟಪಡುತ್ತೇನೆ' ಎಂದರು. ಆ ಹೊತ್ತಿಗಾಗಲೇ ನನಗೆ ಇಬ್ಬರು ಮಕ್ಕಳಿದ್ದರು (ಅರಿನ್ ಮತ್ತು ರಿಯಾನ್). ನಾನು ಅವರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದೆ," ಎಂದು ನೆನಪಿಸಿಕೊಂಡಿದ್ದಾರೆ. 2002ರಲ್ಲಿ 'ದೇವದಾಸ್' ಚಿತ್ರದ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಮಾಧುರಿ, ಸಂಸಾರದಲ್ಲಿ ಬ್ಯುಸಿಯಾಗಿದ್ದರು.

"ನನ್ನನ್ನು ಯಾಕೆ ಪನಿಷ್ ಮಾಡುತ್ತಿದ್ದೀಯಾ?"

ಹುಸೇನ್ ಅವರು ಮನೆಗೆ ಬಂದ ತಕ್ಷಣ ಮಾಧುರಿಯವರ ಚಿತ್ರ ಬಿಡಿಸಲು ಮುಂದಾದರಂತೆ. ಆಗ ಮಾಧುರಿ, "ಬೇಡ, ನೀವು ಪ್ರಯಾಣ ಮಾಡಿ ಬಂದಿದ್ದೀರಿ. ಈಗ ಪೇಂಟಿಂಗ್ ಮಾಡಬೇಡಿ, ವಿಶ್ರಾಂತಿ ತೆಗೆದುಕೊಳ್ಳಿ" ಎಂದು ವಿನಂತಿಸಿದರು. ಆಗ ಹುಸೇನ್ ಅವರು, "ನನ್ನನ್ನು ಯಾಕೆ ಹೀಗೆ ಪನಿಷ್ (ಶಿಕ್ಷೆ) ಮಾಡುತ್ತಿದ್ದೀಯಾ?" ಎಂದು ಕೇಳಿದರು. ಮಾಧುರಿಗೆ ಆಶ್ಚರ್ಯವಾಯಿತು. ಆಗ ಹುಸೇನ್, "ನಾನು ಪೇಂಟಿಂಗ್ ಮಾಡುವಾಗ ಮಾತ್ರ ಅತಿ ಹೆಚ್ಚು ರಿಲ್ಯಾಕ್ಸ್ ಆಗಿರುತ್ತೇನೆ. ಅದು ನನಗೆ ವಿಶ್ರಾಂತಿ ಇದ್ದಂತೆ" ಎಂದರಂತೆ.

ಈ ಮಾತು ಮಾಧುರಿಯವರ ಮನ ಮುಟ್ಟಿತು. "ನನಗೂ ಹಾಗೆಯೇ ಅನ್ನಿಸುತ್ತದೆ. ನಾನು ಕ್ಯಾಮೆರಾ ಮುಂದೆ ಇದ್ದಾಗ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವಾಗ ಅತ್ಯಂತ ಆರಾಮವಾಗಿರುತ್ತೇನೆ. ಹುಸೇನ್ ಜೀ ಅವರ ಆ ಮಾತು ನನ್ನೊಳಗಿನ ಕಲಾವಿದೆಯನ್ನು ಮತ್ತೆ ಬಡಿದೆಬ್ಬಿಸಿತು," ಎಂದು ಮಾಧುರಿ ಹೇಳಿದ್ದಾರೆ.

ಬಟ್ಟೆಯ ಬದಲು ಬಣ್ಣ ತುಂಬಿದ್ದ ಬ್ಯಾಗ್!

ಇದೇ ವೇಳೆ ನಡೆದ ಮತ್ತೊಂದು ತಮಾಷೆಯ ಪ್ರಸಂಗವನ್ನೂ ಮಾಧುರಿ ಹಂಚಿಕೊಂಡಿದ್ದಾರೆ. ಹುಸೇನ್ ಅವರು ಬರುವಾಗ ಕೇವಲ ಒಂದು ಚಿಕ್ಕ ರೋಲ್-ಅವೇ (Rollaway) ಬ್ಯಾಗ್ ತಂದಿದ್ದರಂತೆ. ಅದರಲ್ಲಿ ಬಟ್ಟೆಗಳಿರಬಹುದು ಎಂದು ಮಾಧುರಿ ಭಾವಿಸಿದ್ದರು. ಆದರೆ ಹುಸೇನ್ ಪೇಂಟಿಂಗ್ ಮಾಡಲು ಕ್ಯಾನ್ವಾಸ್ ಕೇಳಿದಾಗ, ಮಾಧುರಿ "ಸರಿ, ಆದರೆ ಪೇಂಟ್ಸ್ ತರಬೇಕಲ್ಲವೇ?" ಎಂದರು. ಆಗ ಹುಸೇನ್ ತಮ್ಮ ಬ್ಯಾಗ್ ತೋರಿಸಿ "ಬಣ್ಣ ಇಲ್ಲಿದೆ ನೋಡು" ಎಂದರು.

ಗಲಿಬಿಲಿಗೊಂಡ ಮಾಧುರಿ, "ಹಾಗಾದರೆ ನಿಮ್ಮ ಬಟ್ಟೆ ಎಲ್ಲಿದೆ? ಏನನ್ನು ಧರಿಸುತ್ತೀರಿ?" ಎಂದು ಕೇಳಿದರು. ಅದಕ್ಕೆ ಹುಸೇನ್ ನಗುತ್ತಾ, "ನಾನು ಹಾಕಿಕೊಂಡಿರುವ ಶರ್ಟ್ ಮತ್ತು ಪ್ಯಾಂಟ್ ಅಷ್ಟೇ ನನ್ನ ಬಳಿ ಇರುವುದು. ಡೆನ್ವರ್‌ನಲ್ಲಿ ಚಳಿ ಇರುವ ಕಾರಣ ಒಳಗೆ ಪೈಜಾಮ ಹಾಕಿಕೊಂಡಿದ್ದೇನೆ," ಎಂದರು. ಇದನ್ನು ಕೇಳಿ ನಕ್ಕ ಮಾಧುರಿ, ತಕ್ಷಣವೇ ಅವರನ್ನು ಶಾಪಿಂಗ್‌ಗೆ ಕರೆದುಕೊಂಡು ಹೋದರಂತೆ.

ಕಲಾ ಲೋಕದ ನಂಟು:

ಎಂ.ಎಫ್. ಹುಸೇನ್ ಅವರು ಮಾಧುರಿಗಾಗಿ 'ಗಜಗಾಮಿನಿ' (2000) ಎಂಬ ಸಿನಿಮಾವನ್ನೇ ಮಾಡಿದ್ದರು. ಅಲ್ಲದೆ ಮಾಧುರಿ ನಟಿಸಿದ 'ಮೊಹಬ್ಬತ್' (1997) ಚಿತ್ರದಲ್ಲಿ ಮಾಧುರಿ ಪೇಂಟರ್ ಪಾತ್ರದಲ್ಲಿ ಕಾಣಿಸಿಕೊಂಡಾಗ, ಅಲ್ಲಿ ಬಳಸಲಾದ ಪೇಂಟಿಂಗ್‌ಗಳು ಹುಸೇನ್ ಅವರದ್ದೇ ಆಗಿದ್ದವು. ಹುಸೇನ್ ಅವರ ಆ ಭೇಟಿ ಮತ್ತು ಕಲೆಯ ಬಗೆಗಿನ ಮಾತುಗಳು ಮಾಧುರಿ ಮತ್ತೆ ಬಾಲಿವುಡ್‌ಗೆ ಮರಳಲು ಪ್ರೇರಣೆ ನೀಡಿದವು. ತದನಂತರ 2007ರಲ್ಲಿ 'ಆಜಾ ನಚ್ಲೇ' ಮೂಲಕ ಕಮ್‌ಬ್ಯಾಕ್ ಮಾಡಿದ ಮಾಧುರಿ, 2011ರಲ್ಲಿ ಕುಟುಂಬ ಸಮೇತ ಮುಂಬೈಗೆ ಮರಳಿ ಬಣ್ಣದ ಲೋಕದಲ್ಲಿ ಸಕ್ರಿಯರಾದರು.