ಸುನೀಲ್ ಶೆಟ್ಟಿಯವರನ್ನು ಸಮರ್ಥವಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಅವರು ಕಡಿಮೆ ಸಮಯ ಕಾಣಿಸಿಕೊಂಡರೂ ಕತೆಗೊಂದು ಘನತೆ ತಂದುಕೊಟ್ಟಿದ್ದಾರೆ. ನವೀನ್ ಡಿ. ಪಡೀಲ್ ಇಲ್ಲಿ ಗಂಭೀರ ಪಾತ್ರವನ್ನು ನಿರ್ವಹಿಸಿ ಕಾಡುವಂತೆ ನಟಿಸಿದ್ದಾರೆ.
ರಾಜೇಶ್
ಅದೊಂದು ಸೇತುವೆ ಇಲ್ಲದ ಊರು. ನದಿ ದಾಟಲು ಸುತ್ತು ಬಳಸಿ ಹೋಗಬೇಕು. ಅಂಥದ್ದೊಂದು ಊರಿಗೆ ಸೇತುವೆ ಕಟ್ಟಲು ಹೊರಟ ತರುಣನೊಬ್ಬ ಮನುಷ್ಯ ಮನುಷ್ಯರ ಹೃದಯಕ್ಕೆ ಪ್ರೀತಿಯ ಸೇತುವೆ ಕಟ್ಟುವ ಸಿನಿಮಾ ಇದು. ತುಳು ಮತ್ತು ಕನ್ನಡದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ತುಳುನಾಡಿನ ಪ್ರಖ್ಯಾತ ಕಲಾವಿದರೆಲ್ಲಾ ಇದ್ದಾರೆ. ಅವರಿದ್ದಾರೆ ಎಂದರೆ ಸಾಕು ನಗುವಿಗೆ ಬರವಿಲ್ಲ ಎಂಬ ನಂಬಿಕೆ ತುಳು ಸಿನಿಮಾ ಪ್ರೇಮಿಗಳಲ್ಲಿದೆ. ಅದಕ್ಕೆ ಪೂರಕವಾಗಿ ಆ ಕಲಾವಿದರೆಲ್ಲಾ ನಟಿಸಿದ್ದಾರೆ. ಅದರ ಜೊತೆಗೆ ಇಲ್ಲಿ ಒಂದು ಮೂಲಭೂತ ಸೌಕರ್ಯಗಳ ಕೊರತೆ ಇರುವ ಒಂದು ಪುಟ್ಟ ಹಳ್ಳಿಯ ಕತೆ ಇದೆ.
ಆ ಕತೆಯಲ್ಲಿ ನಿರುದ್ಯೋಗಿ ನಾಯಕನಿದ್ದಾನೆ. ರಾಜಕೀಯ ಖಳನಾಯಕನಿದ್ದಾನೆ. ಪ್ರತೀ ಊರಿಗಾಗಿ ಹೋರಾಡುವ ಯುವಕರ ಪಡೆ ಇದೆ. ಆಸೆ ಇದೆ, ದುರಾಸೆಯಿದೆ, ಪ್ರೇಮವಿದೆ, ಸ್ನೇಹವಿದೆ, ದ್ರೋಹವಿದೆ, ಕುತಂತ್ರವಿದೆ, ಚಾಣಾಕ್ಷತನವಿದೆ, ಕ್ರೌರ್ಯವಿದೆ ಮತ್ತು ಒಳ್ಳೆಯತನವೂ ಇದೆ. ಇಲ್ಲಿ ಕತೆ ಅಪರೂಪದ್ದು ಅನ್ನಿಸದಿದ್ದರೂ ಇದು ಅನ್ಯಾಯದ ವಿರುದ್ಧ ಹೋರಾಡುವ ಅಶಕ್ತರ ಕತೆ ಆಗಿರುವುದರಿಂದ ತಟ್ಟುವ ಗುಣವನ್ನು ಹೊಂದಿದೆ. ಜೊತೆಗೆ ತಮಾಷೆ ಬೋನಸ್.
ಚಿತ್ರ: ಜೈ
ನಿರ್ದೇಶನ: ರೂಪೇಶ್ ಶೆಟ್ಟಿ
ತಾರಾಗಣ: ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್
ರೇಟಿಂಗ್: 3
ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿಯವರನ್ನು ಸಮರ್ಥವಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಅವರು ಕಡಿಮೆ ಸಮಯ ಕಾಣಿಸಿಕೊಂಡರೂ ಕತೆಗೊಂದು ಘನತೆ ತಂದುಕೊಟ್ಟಿದ್ದಾರೆ. ನವೀನ್ ಡಿ. ಪಡೀಲ್ ಇಲ್ಲಿ ಗಂಭೀರ ಪಾತ್ರವನ್ನು ನಿರ್ವಹಿಸಿ ಕಾಡುವಂತೆ ನಟಿಸಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಹೋದರೆ ಒಂದೂರನ್ನು ಹೇಗೆ ತುಳಿಯಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳುವುದು ಈ ಸಿನಿಮಾದ ಹೆಚ್ಚಾಗಾರಿಕೆ.


