01 ಡಿಸೆಂಬರ್ 2025ರಂದು ಕೊಯಮತ್ತೂರಿನ ಈಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ದಿ ವಿವಾಹ ಪದ್ಧತಿಯಲ್ಲಿ ಸಮಂತಾ-ನಿಡಿಮೋರು ವಿವಾಹ ನೆರವೇರಿದೆ. ಸಹೋದರನ ವಿವಾಹದ ಬಗ್ಗೆ ಇನ್‌ ಸ್ಟಾಗ್ರಾಂನಲ್ಲಿ ಶೀತಲ್ ನಿಡಿಮೋರು ಪೋಸ್ಟ್ ಹಂಚಿಕೊಂಡಿದ್ದಾರೆ. 

ಸಮಂತಾ-ರಾಜ್ ನಿಡಿಮೋರು ಮದುವೆ

ಖ್ಯಾತ ನಟಿ ಸಮಂತಾ ಪ್ರಭು (Samantha Ruth Prabhu) ಮತ್ತು ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೋಡಿ ತಮಿಳುನಾಡು ಕೊಯಮುತ್ತೂರಿನ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರ ಈಶಾ ಯೋಗ ಸೆಂಟರ್‌ನಲ್ಲಿ ವಿವಾಹ ಆಗಿದ್ದು ಗೊತ್ತೇ ಇದೆ. ಈ ವಿವಾಹದ ಬಗ್ಗೆ ಸಂತಸ ಹಂಚಿಕೊಂಡಿರುವ ನಿಡಿಮೋರು ಸಹೋದರಿ ಶೀತಲ್ (Sheetal), ಪ್ರತಿಯೊಬ್ಬರು ತಮ್ಮ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.

01 ಡಿಸೆಂಬರ್ 2025ರಂದು ಕೊಯಮತ್ತೂರಿನ ಈಶಾ ಯೋಗ ಕೇಂದ್ರದ (Isha Yoga Center, Coimbatore) ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ದಿ ವಿವಾಹ ಪದ್ಧತಿಯಲ್ಲಿ ಸಮಂತಾ-ನಿಡಿಮೋರು ವಿವಾಹ ನೆರವೇರಿದೆ. ಸಹೋದರನ ವಿವಾಹದ ಬಗ್ಗೆ ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶೀತಲ್, ತಮ್ಮ ಅತ್ತಿಗೆ ಸಮಂತಾ ಅವರನ್ನು ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

'ನಾನು ಇಂದು ಪ್ರಾರ್ಥನೆ ಮಾಡುತ್ತಿರುವಾಗ ಕಂಬನಿ ತುಂಬಿದ ಕಣ್ಣುಗಳಿಂದ ನಡುಗುತ್ತಾ ಶಿವಲಿಂಗವನ್ನು ಅಪ್ಪಿಕೊಂಡೆ. ಇದು ನೋವಿನಿಂದ ಬಂದ ಕಣ್ಣೀರಲ್ಲ, ಕೃತಜ್ಞತೆಯ ಕಣ್ಣೀರು' ಎಂದು ಬರೆದುಕೊಂಡಿದ್ದಾರೆ.

ಶಾಂತಿ ಮತ್ತು ನೆಮ್ಮದಿಯನ್ನು ತಂದಿದೆ

'ರಾಜ್ ಮತ್ತು ಸಮಂತಾ ವಿವಾಹವು ನಮ್ಮ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತಂದಿದೆ, ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಒಂದು ಕುಟುಂಬವಾಗಿ ಅವರು ಹೇಗೆ ಮುಂದೆ ನಡೆಯುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಹೆಮ್ಮೆಯಿದೆ. ಎರಡು ಹೃದಯಗಳು ಒಂದೇ ಮಾರ್ಗವನ್ನು ಆಯ್ದುಕೊಂಡಾಗ ಮಾತ್ರ ಶಾಂತಿ ನೆಲೆಸುತ್ತದೆ, ಅಲ್ಲಿ ಆತ್ಮತೃಪ್ತಿ ಸಹ ಮೂಡುತ್ತದೆ' ಎಂದು ಹೇಳಿದ್ದಾರೆ. ಜೊತೆಗೆ, 'ಒಂದು ಕುಟಂಬದವರಾಗಿ ಅವರೊಂದಿಗೆ ನಾವು ಸದಾ ನಿಲ್ಲುತ್ತೇವೆ. ಎಲ್ಲ ರೀತಿಯಲ್ಲೂ ಬೆಂಬಲಿಸುತ್ತೇವೆ' ಎಂದಿದ್ದಾರೆ.

'ಕೆಲವು ಸಂಬಂಧಗಳು ಸುಮ್ಮನೆ ಹುಟ್ಟುವುದಿಲ್ಲ... ಅವುಗಳು ಶಾಂತಿಯನ್ನು ಹೊತ್ತುಕೊಂಡು ನಮ್ಮೆಡೆಗೆ ಬರುತ್ತವೆ. ಪ್ರತಿಯೊಬ್ಬರಿಗೂ ಇಂತಹ ಪ್ರೀತಿ ತುಂಬಿದ, ಶಾಂತಿಯುತ ಸಂಬಂಧಗಳು ಸಿಗಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ಹೇಳಿದ್ದಾರೆ ಶೀತಲ್. ಸಮಂತಾ ಹಾಗೂ ರಾಜ್ ನಿಡಿಮೋರು ಅವರಿಬ್ಬರೂ ಕಳೆದ ಕೆಲವು ಸಮಯಗಳಿಂದ ಪ್ರೀತಿಸುತ್ತಿದ್ದರು. ಅವರಿಬ್ಬರೂ ವಿವಾಹ ಆಗಬಹುದು ಎಂಬ ಗಾಸಿಪ್ ಸಾಕಷ್ಟು ಕಾಲದಿಂದ ಚಾಲ್ತಿಯಲ್ಲಿತ್ತು. ಆದರೆ, ಸಮಂತಾ ಹಾಗೂ ರಾಜ್ ಇಬ್ಬರೂ ತಮ್ಮ ವೃತ್ತಿಪರ ಸಂಗತಿಗಳನ್ನು ಮಾತ್ರ ಸಾರ್ವಜನಿಕವಾಗಿ ಹಂಚಿಕೊಂಡು, ವೈಯಕ್ತಿಕ ಸಂಗತಿಗಳನ್ನು ಪ್ರಚಾರಗಳಿಂದ ದೂರವಿಟ್ಟಿದ್ದರು.

ಲಿಂಗ ಭೈರವಿ ಸಮ್ಮುಖದಲ್ಲಿ ಮದುವೆ

ಇದೀಗ, ಸಮಂತಾ ಹಾಗೂ ರಾಜ್ ನಿಡಿಮೋರು ಅವರಿಬ್ಬರೂ ಕೊಯಮುತ್ತೂರಿನ ಲಿಂಗ ಭೈರವಿ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ಎಲ್ಲಾ ಗಾಸಿಪ್‌ಗಳಿಗೂ ತೆರೆ ಬಿದ್ದಿದೆ. ಸಮಂತಾ ಅವರು ಹಲವು ವರ್ಷಗಳ ಹಿಂದೆಯೇ ಸದ್ಗುರುಗಳಿಂದ ದೀಕ್ಷೆ ಪಡೆದು, ಕೊಯಮುತ್ತೂರಿನ ಈಶಾ ಯೋಗ ಕೇಂದ್ರಕ್ಕೆ ಅಗಾಗ ಭೇಟಿ ನೀಡುತ್ತಿದ್ದರು, ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಈ ಮೂಲಕ ಸಮಂತಾ ಸಮಾಜಿಕದ ಜೊತೆಗೆ ಆಧ್ಯಾತ್ಮಿಕ ಪಯಣದಲ್ಲಿಯೂ ಸಾಗುತ್ತಿದ್ದಾರೆ ಎಂಬುದು ಜಗತ್ತಿನ ಗಮನಕ್ಕೆ ಬಂದಿತ್ತು. ಅವರ ಪತಿ ರಾಜ್ ನಿಡಿಮೋರು ಕೂಡ ಆಧ್ಯಾತ್ಮಿಕ ದಾರಿಯಲ್ಲಿ ಸಾಗುತ್ತಿದ್ದು, ಇದೀಗ ಒಂದೇ ದಾರಿಯಲ್ಲಿ ಈ ಜೋಡಿ ಸಾಗಲಿದೆ. ಈ ಬಗ್ಗೆ ರಾಜ್ ಸಹೋದರಿ ಶೀತಲ್ ಖುಷಿ ಸುದ್ದಿ ಕೂಡ ವೈರಲ್ ಅಗುತ್ತಿದೆ.