ಮ್ಯಾನೇಜರ್ ಆಗಿದ್ರೂ ಕೂಡ ಪಬ್ಲಿಕ್‌ನಲ್ಲಿ ಆರ್ಯನ್ ಖಾನ್ ಮಿಡ್ಲ್ ಫಿಂಗರ್ ತೋರಿಸಿರೋದು ತಪ್ಪು.. ಅದು ಅವರ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ. ಝೈದ್ ಖಾನ್ ಅಂಥವರು ಅದನ್ನೆಲ್ಲಾ ಸಪೋರ್ಟ್ ಮಾಡುವ ಮೂಲಕ ಆರ್ಯನ್ ಖಾನ್ ಅವರು ಮುಂದೊಂದು ದಿನ ಪ್ರಪಾತಕ್ಕೆ ಬೀಳಲು ಕಾರಣರಾಗಲಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಡ್ರಗ್ಸ್ ಪ್ರಕರಣದ ಬಳಿಕ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಆರ್ಯನ್, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದರ ಮೂಲಕ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಂಗಳೂರಿನ ಪಬ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಯನ್ ಖಾನ್ ನೆರೆದಿದ್ದ ಜನರತ್ತ 'ಮಿಡಲ್ ಫಿಂಗರ್' (ಅಸಭ್ಯ ಸನ್ನೆ) ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ಆರ್ಯನ್ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿತ್ತು.
ಆದರೆ, ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಯಾಂಡಲ್ ವುಡ್ ನಟ ಹಾಗೂ ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ (Zaid Khan), ಆರ್ಯನ್ ಖಾನ್ ಬೆಂಬಲಕ್ಕೆ ನಿಂತಿದ್ದಾರೆ. ಘಟನೆ ನಡೆದಾಗ ಆರ್ಯನ್ ಜೊತೆಯಲ್ಲೇ ಇದ್ದ ಝೈದ್, ಅಂದು ನಿಜವಾಗಿಯೂ ನಡೆದಿದ್ದೇನು ಎಂಬ ಸತ್ಯವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಝೈದ್ ಖಾನ್ ಹೇಳಿದ್ದೇನು?
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಟ ಝೈದ್ ಖಾನ್, ಈ ಇಡೀ ಪ್ರಕರಣವು ಒಂದು ದೊಡ್ಡ "ತಪ್ಪು ತಿಳುವಳಿಕೆ" (Misunderstanding) ಎಂದು ಸ್ಪಷ್ಟಪಡಿಸಿದ್ದಾರೆ. ಆರ್ಯನ್ ಖಾನ್ ಜನರನ್ನು ನೋಡಿ ಅಸಭ್ಯ ಸನ್ನೆ ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ವಿವರಿಸಿದ ಝೈದ್, "ಅಂದು ಪಬ್‌ನಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಷ್ಟು ದೊಡ್ಡ ಜನಸಂದಣಿಯನ್ನು ಕಂಡು ಆರ್ಯನ್ ಸ್ವಲ್ಪ ಆತಂಕಗೊಂಡಿದ್ದರು. ಹಾಗಾಗಿ, ಜನರನ್ನು ನಿಯಂತ್ರಿಸಲು ಅಥವಾ ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರು ತಮ್ಮ ಮ್ಯಾನೇಜರ್ ಅನ್ನು ಕೆಳಗಡೆ ಕಳುಹಿಸಿದ್ದರು. ಆದರೆ, ಮ್ಯಾನೇಜರ್ ಕೆಳಗೆ ಹೋಗಿ ಬಹಳ ಸಮಯವಾದರೂ ವಾಪಸ್ ಬರಲಿಲ್ಲ. ಇದರಿಂದ ಗೊಂದಲಗೊಂಡ ನಾವು (ಆರ್ಯನ್ ಮತ್ತು ಝೈದ್) ಏನಾಗುತ್ತಿದೆ ಎಂದು ನೋಡಲು ಬಾಲ್ಕನಿಗೆ ಬಂದೆವು," ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಬಾಲ್ಕನಿಯಲ್ಲಿ ನಿಂತಿದ್ದ ಆರ್ಯನ್, ಕೆಳಗಡೆ ಇದ್ದ ತಮ್ಮ ಮ್ಯಾನೇಜರ್ ಕಮ್ ಸ್ನೇಹಿತನಿಗೆ ಕೈ ಸನ್ನೆ ಮಾಡಿದರು. ಅದು ಅವರ ಮ್ಯಾನೇಜರ್‌ಗೆ ಉದ್ದೇಶಿಸಿ ಮಾಡಿದ ಸನ್ನೆಯೇ ಹೊರತು, ಅಲ್ಲಿ ನೆರೆದಿದ್ದ ಜನರಿಗಾಗಲಿ ಅಥವಾ ಕನ್ನಡಿಗರಿಗಾಗಲಿ ಮಾಡಿದ ಅವಮಾನವಲ್ಲ. ಕ್ಯಾಮೆರಾ ಆ್ಯಂಗಲ್ ನಿಂದಾಗಿ ಅದು ಜನರಿಗೆ ತೋರಿಸಿದಂತೆ ಕಂಡಿರಬಹುದು. ಆದರೆ ಆರ್ಯನ್ ಖಾನ್ ಆ ರೀತಿ ನಡೆದುಕೊಳ್ಳುವ ವ್ಯಕ್ತಿಯಲ್ಲ. ಇದನ್ನು ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.
ಆರ್ಯನ್ ಮತ್ತು ಝೈದ್ ಒಟ್ಟಿಗೆ ಬಂದಿದ್ದು ಹೇಗೆ?
ತಮ್ಮ ಮತ್ತು ಆರ್ಯನ್ ಖಾನ್ ನಡುವಿನ ಸ್ನೇಹದ ಬಗ್ಗೆಯೂ ಮಾತನಾಡಿದ ಝೈದ್, "ಆರ್ಯನ್ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ನನಗೆ ಮೊದಲೇ ಮೆಸೇಜ್ ಮಾಡಿದ್ದರು. ನಾವು ಸ್ನೇಹಿತರಾಗಿರುವುದರಿಂದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಒಟ್ಟಿಗೆ ಭಾಗವಹಿಸಿದ್ದೆವು," ಎಂದು ತಿಳಿಸಿದ್ದಾರೆ.
ಏನಿದು ದೂರು?
ನವೆಂಬರ್ 28 ರಂದು ಬೆಂಗಳೂರಿನ ಅಶೋಕ ನಗರ ವ್ಯಾಪ್ತಿಯಲ್ಲಿರುವ ಪಬ್ ಒಂದರಲ್ಲಿ ಈ ಘಟನೆ ನಡೆದಿತ್ತು. ಆರ್ಯನ್ ಖಾನ್ ಸಾರ್ವಜನಿಕವಾಗಿ ಅಸಭ್ಯ ಸನ್ನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರಾದ ಓವೈಜ್ ಹುಸೇನ್ ಎಂಬುವವರು ಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ, "ಆರ್ಯನ್ ಖಾನ್ ಉದ್ದೇಶಪೂರ್ವಕವಾಗಿ ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ಮಹಿಳೆಯರ ಸಮ್ಮುಖದಲ್ಲಿ ಅಸಭ್ಯ ಮತ್ತು ಅವಮಾನಕರ ಸನ್ನೆ ಮಾಡಿದ್ದಾರೆ. ಇದು ಮಹಿಳೆಯರ ಘನತೆಗೆ ಧಕ್ಕೆ ತರುವಂತದ್ದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಕೃತ್ಯವಾಗಿದೆ," ಎಂದು ಆರೋಪಿಸಲಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ಸುರಕ್ಷಿತ ತಾಣ ಎಂದು ಕರೆಯಲ್ಪಡುವ ಬೆಂಗಳೂರಿನ ಹೆಸರಿಗೆ ಈ ಘಟನೆಯಿಂದ ಕಳಂಕ ಉಂಟಾಗಿದೆ ಎಂದು ದೂರುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಆರ್ಯನ್ ಖಾನ್ ಅವರ ಕೈ ಸನ್ನೆ ವಿವಾದವು ಕಾನೂನು ಹೋರಾಟದ ಹಂತಕ್ಕೆ ತಲುಪಿದ್ದು, ಪ್ರತ್ಯಕ್ಷದರ್ಶಿಯಾಗಿ ಝೈದ್ ಖಾನ್ ನೀಡಿರುವ ಈ ಸ್ಪಷ್ಟನೆ ಪ್ರಕರಣಕ್ಕೆ ಯಾವ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬೇರೆಯದೇ ಕಾಮೆಂಟ್ ಕಾಣಿಸಿಕೊಳ್ಳುತ್ತಿದೆ. ಮ್ಯಾನೇಜರ್‌ಗೆ ಕೂಡ, ಅದೂ ಪಬ್ಲಿಕ್‌ನಲ್ಲಿ ಆರ್ಯನ್ ಖಾನ್ ಮಿಡ್ಲ್ ಫಿಂಗರ್ ತೋರಿಸಿರೋದ ತಪ್ಪು.. ಅದು ಅವರ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ. ಝೈದ್ ಖಾನ್ ಅಂಥವರು ಅದನ್ನೆಲ್ಲಾ ಸಪೋರ್ಟ್ ಮಾಡುವ ಮೂಲಕ ಆರ್ಯನ್ ಖಾನ್ ಅವರು ಮುಂದೊಂದು ದಿನ ಪ್ರಪಾತಕ್ಕೆ ಬೀಳಲು ಕಾರಣರಾಗಲಿದ್ದಾರೆ ಎನ್ನಲಾಗುತ್ತಿದೆ. ನೀವೇನಂತೀರಿ?


