ಏಷ್ಯಾಕಪ್ ಟಿ20 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಪಾಕಿಸ್ತಾನವು ಬದ್ಧವೈರಿ ಭಾರತವನ್ನು ಎದುರಿಸಲಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ.
ದುಬೈ: ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಎದುರಾಗಲಿದೆ. ಗುರುವಾರ ನಡೆದ ಸೂಪರ್ -4 ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿತು. ಏಷ್ಯಾಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಕಾದಾಡಲಿವೆ.
ಭಾರತ ವಿರುದ್ಧ ಸೋತು, ಶ್ರೀಲಂಕಾ ವಿರುದ್ದ ಗೆದ್ದಿದ್ದ ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ವರ್ಚುವಲ್ ಸೆಮಿಫೈನಲ್‌ನಂತಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 10.5 ಓವರಲ್ಲಿ 49 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಮೊಹಮದ್ ಹ್ಯಾರಿಸ್ 31, ಶಾಹೀನ್ ಅಫ್ರಿದಿ 19, ಮೊಹಮದ್ ನವಾಜ್ 25, ಫಹೀಂ ಔಟಾಗದೆ 14 ರನ್ ಗಳಿಸಿ ತಂಡ 100 ರನ್ ದಾಟಲು ನೆರವಾದರು. ಪಾಕ್ 8 ವಿಕೆಟ್‌ಗೆ 135 ರನ್ ಕಲೆಹಾಕಿತು.
ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ 73ಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಶಮಿಮ್ ಹೊಸೈನ್‌ರನ್ನು ಹೊರತುಪಡಿಸಿ ಉಳಿದವರಿಂದ ಹೋರಾಟ ಮೂಡಿಬರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 9 ವಿಕೆಟ್‌ಗೆ 124 ರನ್ ಗಳಿಸಿ ಸೋಲುಂಡಿತು.
ಮೊದಲ ಫೈನಲ್ ಮುಖಾಮುಖಿ
ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್ ಫೈನಲ್ ನಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗಲಿವೆ. ಈ ವರೆಗೂ ಉಭಯ ತಂಡಗಳು ಏಷ್ಯಾಕಪ್ ನಲ್ಲಿ 18 ಬಾರಿ (ಏಕದಿನ, ಟಿ20) ಮುಖಾಮುಖಿಯಾಗಿವೆ. ಈ ಪಂದ್ಯಗಳು ಗುಂಪು ಹಂತ, ಸೂಪರ್ -4 ಹಂತಗಳಲ್ಲಿ ನಡೆದಿವೆ.
2 ವಾರದಲ್ಲಿ 3ನೇ ಬಾರಿಗೆ ಭಾರತ-ಪಾಕ್ ಸೆಣಸು!
ಈ ಸಲದ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 3ನೇ ಬಾರಿಗೆ ಪರಸ್ಪರ ಎದುರಾಗಲಿವೆ. ಗುಂಪು ಹಂತದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, ಸೂಪರ್ -4 ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಸೆ.28ರಂದು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಬದ್ಧವೈರಿಯನ್ನು ಮತ್ತೊಮ್ಮೆ ಹೊಸಕಿ ಹಾಕಿ, 9ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಲು ಭಾರತ ಕಾತರಿಸುತ್ತಿದೆ.
ಸ್ಕೋರ್: ಪಾಕಿಸ್ತಾನ 20 ಓವರ್‌ಗಳಲ್ಲಿ 135/8 (ಹ್ಯಾರಿಸ್ 31, ನವಾಜ್ 25, ಟಸ್ಕಿನ್ 3-28)
ಬಾಂಗ್ಲಾದೇಶ 20 ಓವರಲ್ಲಿ 124/9 (ಶಮೀಮ್ 30, ಶಾಹೀನ್ ಅಫ್ರಿದಿ 3-17)
ಇಂದು ಭಾರತ vs ಲಂಕಾ ಔಪಚಾರಿಕ ಫೈಟ್
ದುಬೈ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ, ಸೂಪರ್-4 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಶುಕ್ರವಾರ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಈಗಾಗಲೇ ಫೈನಲ್ ರೇಸಿಂದ ಹೊರಬಿದ್ದಿರುವ ಕಾರಣ, ಇದೊಂದು ಔಪಚಾರಿಕ ಪಂದ್ಯವಷ್ಟೇ. ಆದರೆ ಫೈನಲ್‌ಗೂ ಮುನ್ನ ಭಾರತ ಉತ್ತಮ ಅಭ್ಯಾಸ ನಡೆಸಲು ಈ ಪಂದ್ಯವನ್ನು ಬಳಸಿಕೊಳ್ಳಲಿದೆ. ಜೊತೆಗೆ ಜಿತೇಶ್ ಶರ್ಮಾ, ರಿಂಕು ಸಿಂಗ್ ಸೇರಿ ಬೆಂಚ್ ಕಾಯುತ್ತಿರುವ ಕೆಲ ಆಟಗಾರರಿಗೆ ಲಂಕಾ ಎದುರು ಅವಕಾಶ ಸಿಗುವ ನಿರೀಕ್ಷೆ ಇದೆ .
ಇನ್ನೊಂದೆಡೆ ಗ್ರೂಪ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಶ್ರೀಲಂಕಾ ತಂಡವು ಸೂಪರ್-4 ಪಂದ್ಯದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸುವ ಭೀತಿಗೆ ಸಿಲುಕಿದೆ. ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಶ್ರೀಲಂಕಾ ಕ್ರಿಕೆಟ್ ತಂಡ ಎದುರು ನೋಡುತ್ತಿದೆ.
ಪಂದ್ಯ: ರಾತ್ರಿ 8ಕ್ಕೆ,
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್


