2025ರ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತದೆದುರು ಸೋತರೂ ಪಾಕಿಸ್ತಾನಕ್ಕೆ ಫೈನಲ್‌ಗೇರುವ ಅವಕಾಶ ಇನ್ನೂ ಇದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಪಾಕ್‌ಗೆ ನಿರ್ಣಾಯಕವಾಗಿದೆ. ಇತ್ತ, ಟೀಂ ಇಂಡಿಯಾ ಫೈನಲ್ ಪ್ರವೇಶಿಸಲು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡವು 6 ವಿಕೆಟ್ ಅಂತರದ ಹೀನಾಯ ಸೋಲು ಕಾಣುತ್ತಿದ್ದಂತೆಯೇ ಫೈನಲ್‌ಗೇರುವ ಹಾದಿ ಮತ್ತಷ್ಟು ದುರ್ಗಮವಾಗಿದೆ. ಏಷ್ಯಾಕಪ್ ಟೂರ್ನಿಯ ಸೂಪರ್-4 ಮಾದರಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಪಾಕಿಸ್ತಾನಕ್ಕೆ ಫೈನಲ್‌ಗೇರಲು ಇನ್ನಷ್ಟು ಅವಕಾಶಗಳಿವೆ.

ಪಾಕಿಸ್ತಾನ ಎದುರು ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ, ಇದೀಗ ಏಷ್ಯಾಕಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಪಾಕಿಸ್ತಾನ ತಂಡವು ಸೂಪರ್ 4 ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದೆ. ಆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೇ ಈಗಲೂ ಪಾಕಿಸ್ತಾನಕ್ಕೆ ಫೈನಲ್‌ಗೇರಲು ಅವಕಾಶವಿದೆ. ಆದರೆ ಪಾಕಿಸ್ತಾನ ತಂಡದ ಒಂದು ತಪ್ಪು ಹೆಜ್ಜೆ ಏಷ್ಯಾಕಪ್ ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಲಿದೆ.

ಇನ್ನೂ ಪಾಕಿಸ್ತಾನಕ್ಕಿದೆ ಫೈನಲ್‌ಗೇರುವ ಚಾನ್ಸ್!

ಪಾಕಿಸ್ತಾನ ಕ್ರಿಕೆಟ್ ತಂಡವು ಸೂಪರ್-4 ಹಂತದ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 23ರ ಮಂಗಳವಾರ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಶ್ರೀಲಂಕಾ ಕ್ರಿಕೆಟ್ ತಂಡವು ಗ್ರೂಪ್ 'ಬಿ'ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೂಪರ್-4 ಪ್ರವೇಶಿಸಿತ್ತು. ಆದರೆ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಹೀಗಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.

ಮಂಗಳವಾರ ನಡೆಯಲಿರುವ ಲಂಕಾ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸೋಲು ಕಾಣುವ ತಂಡವು ಅಧಿಕೃತವಾಗಿ ಏಷ್ಯಾಕಪ್ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ. ಒಂದು ವೇಳೆ ಪಾಕಿಸ್ತಾನ ತಂಡವು, ಮಂಗಳವಾರ ಶ್ರೀಲಂಕಾ ತಂಡವನ್ನು ಮಣಿಸಿದರೆ, ಗುರುವಾರ ಅಂದರೆ ಸೆಪ್ಟೆಂಬರ್ 25ರಂದು ಪಾಕ್‌ಗೆ ಬಾಂಗ್ಲಾದೇಶದ ಸವಾಲು ಎದುರಾಗಲಿದೆ. ಒಂದು ವೇಳೆ ಪಾಕಿಸ್ತಾನ ತಂಡವು, ಬಾಂಗ್ಲಾದೇಶವನ್ನು ಸೋಲಿಸಿದರೆ, ಸೆಪ್ಟೆಂಬರ್ 28ರಂದು ನಡೆಯಲಿರುವ ಏಷ್ಯಾಕಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಭಾರತ ಫೈನಲ್ ಲೆಕ್ಕಾಚಾರ ಏನು?

ಹಾಲಿಚಾಂಪಿಯನ್ ಟೀಂ ಇಂಡಿಯಾ, ಈ ಬಾರಿ ಫೈನಲ್‌ಗೇರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಪಾಕಿಸ್ತಾನ ಎದುರು ಗೆದ್ದ ಮಾತ್ರಕ್ಕೆ ಭಾರತದ ಫೈನಲ್ ಸ್ಥಾನ ಕನ್ಫರ್ಮ್‌ ಆಗಿಲ್ಲ. ಭಾರತ ಸೂಪರ್-4 ಹಂತದಲ್ಲಿ ಇನ್ನೂ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡದ ಸವಾಲನ್ನು ಎದುರಿಸಲಿದೆ. ಸೆಪ್ಟೆಂಬರ್ 24ರಂದು ಬಾಂಗ್ಲಾದೇಶ ಹಾಗೂ ಸೆಪ್ಟೆಂಬರ್ 26ರಂದು ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ಈ ಎರಡು ಪಂದ್ಯಗಳ ಪೈಕಿ ಭಾರತ ಕನಿಷ್ಠ ಒಂದು ಪಂದ್ಯ ಜಯಿಸಿದರೂ ಅಧಿಕೃತವಾಗಿ ಫೈನಲ್‌ಗೆ ಲಗ್ಗೆಯಿಡಲಿದೆ.