ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೋಹಿತ್ ಶರ್ಮಾ ಸ್ಥಾನಕ್ಕೆ ಯುವ ಆಟಗಾರ ಶುಭಮನ್ ಗಿಲ್‌ರನ್ನು ನೇಮಿಸಲಾಗಿದೆ. 2027ರ ಏಕದಿನ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು, ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಅಹಮದಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಲಾಗಿದ್ದು, ಯುವ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ. ಈ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗಿಲ್ ನಾಯಕತ್ವದಲ್ಲೇ ಆಡಲಿದೆ ಎಂದ ಸಂದೇಶ ರವಾನಿಸಲಾಗಿದೆ.
ಇನ್ನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 2027ರ ವಿಶ್ವಕಪ್‌ವರೆಗೂ ತಂಡದಲ್ಲಿರುತ್ತಾರೊ ಇಲ್ಲವೊ ಎಂಬ ಪ್ರಶ್ನೆಗೆ ಆಯ್ಕೆ ಸಮಿತಿಯ ಅಗರ್ಕರ್ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ವರದಿಗಳ ಪ್ರಕಾರ, ರೋಹಿತ್, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ ಆಗಲೂಬಹುದು. ಒಂದು ವೇಳೆ ಅವರನ್ನು ತಂಡದಲ್ಲಿ ಮುಂದುವರಿಸಿದರೂ, 2027ರ ವಿಶ್ವಕಪ್ ಮುನ್ನ ಅಥವಾ ಮುಂದಿನ ವರ್ಷವೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.
ರೋಹಿತ್ ನಾಯಕತ್ವ ಯುಗಾಂತ್ಯ!
ಈಗಾಗಲೇ ಅಂ.ರಾ. ಟಿ20, ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ರೋಹಿತ್ ಶರ್ಮಾರ ನಾಯಕತ್ವ ಯುಗಾಂತ್ಯ ಕಂಡಿದೇ ಎಂದೇ ವಿಶ್ಲೇಷಿಸಲಾಗುತ್ತಿದೆ. ಅವರಿಗೆ ಇನ್ನು ಏಕದಿನದಲ್ಲೂ ನಾಯಕರಾಗುವ ಅವಕಾಶ ಇಲ್ಲ. ಈವರೆಗೂ ಭಾರತ ರೋಹಿತ್ ನಾಯಕತ್ವದಲ್ಲಿ ಆಡಿದ 56 ಏಕದಿನದಲ್ಲಿ 42ರಲ್ಲಿ ಗೆದ್ದಿದೆ. 2 ಬಾರಿ ಏಷ್ಯಾಕಪ್, ಒಂದು ಬಾರಿ ಚಾಂಪಿಯನ್ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದ್ದರೂ, 2027ರಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.
ಅ.19ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಸರಣಿಗೆ ಶನಿವಾರ ಭಾರತ ತಂಡ ಪ್ರಕಟಿಸಲಾಯಿತು. ಅಂ.ರಾ. ಟಿ20 ಹಾಗೂ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ಕೆಲ ಸಮಯದಿಂದ ಕ್ರಿಕೆಟ್ ನಿಂದಲೇ ದೂರ ಉಳಿದಿರುವ ರೋಹಿತ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಗಿಲ್ ನಾಯಕನಾಗಿ ಆಯ್ಕೆಯಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಉಪನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಕಾರ್ಯದೊತ್ತಡ ಕಾರಣಕ್ಕೆ ವೇಗಿ ಬುಮ್ರಾಗೆ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ತಂಡಕ್ಕೆ ಮರಳಿದ್ದು, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿಗೆ ಸ್ಥಾನ ಲಭಿಸಿಲ್ಲ. ಗಾಯಾಳುಗಳಾದ ಹಾರ್ದಿಕ್, ರಿಷಭ್ ಕೂಡಾ ಸರಣಿಗೆ ಲಭ್ಯರಿಲ್ಲ. ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಆಗಿ ಆಡಲಿದ್ದು, ಧ್ರುವ್ ಜುರೆಲ್ ಕೂಡಾ ತಂಡದಲ್ಲಿದ್ದಾರೆ.
ಟಿ20 ಸರಣಿಗೂ ತಂಡ ಪ್ರಕಟಿಸಲಾಗಿದ್ದು, ದೊಡ್ಡ ಬದಲಾವಣೆ ಏನೂ ಆಗಿಲ್ಲ. ಸೂರ್ಯಕುಮಾರ್ ನಾಯಕರಾಗಿರಲಿದ್ದು, ಗಿಲ್ ಉಪನಾಯಕತ್ವ ವಹಿಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸರಣಿ ನಡೆಯಲಿದ್ದು, ಮೊದಲ ಏಕದಿನ ಅ.19, 2ನೇ ಪಂದ್ಯ ಅ.23, 3ನೇ ಪಂದ್ಯ ಅ.25ಕ್ಕೆ ನಿಗದಿಯಾಗಿವೆ. 5 ಟಿ20 ಪಂದ್ಯಗಳು ಕ್ರಮವಾಗಿ ಅ.29, ಅ.31, ನ.2, ನ.6, 8ಕ್ಕೆ ನಡೆಯಲಿವೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್(ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್,), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ.
ಅಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.


