ಆ್ಯಶಸ್ ಸರಣಿಯ ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 82 ರನ್ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ, ಸರಣಿ ಕೈವಶ ಮಾಡಿಕೊಂಡು ಕಿರೀಟವನ್ನು ಉಳಿಸಿಕೊಂಡಿದೆ. 435 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಅಂತಿಮ ದಿನ ಹೋರಾಟ ನಡೆಸಿದರೂ, ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು.
ಅಡಿಲೇಡ್: ಆ್ಯಶಸ್ ಸರಣಿಯ ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವನ್ನು 82 ರನ್ಗಳಿಂದ ಸೋಲಿಸಿ, ಇನ್ನೂ ಎರಡು ಟೆಸ್ಟ್ಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಆ್ಯಶಸ್ ಕಿರೀಟವನ್ನು ಉಳಿಸಿಕೊಂಡಿದೆ. 435 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಆದರೆ, ಕೊನೆಯ ದಿನ ಜೇಮಿ ಸ್ಮಿತ್, ವಿಲ್ ಜಾಕ್ಸ್ ಮತ್ತು ಬ್ರೆಡನ್ ಕಾರ್ಸ್ ಅವರ ಅನಿರೀಕ್ಷಿತ ಪ್ರತಿರೋಧವು ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿತ್ತು. ಜೇಮಿ ಸ್ಮಿತ್ ಅವರ ಅರ್ಧಶತಕದ ಬಲದಿಂದ, ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ಏಳು ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತ್ತು. ಗೆಲುವಿಗೆ ಮೂರು ವಿಕೆಟ್ಗಳು ಕೈಯಲ್ಲಿದ್ದಾಗ 126 ರನ್ಗಳು ಬೇಕಾಗಿದ್ದವು.
ಪಂದ್ಯಕ್ಕೆ ತಿರುವು ಕೊಟ್ಟ ವಿಲ್ ಜಾಕ್ಸ್ ವಿಕೆಟ್
ಆದರೆ ಊಟದ ವಿರಾಮದ ನಂತರ, ಹೋರಾಟ ನಡೆಸುತ್ತಿದ್ದ ವಿಲ್ ಜಾಕ್ಸ್ (47) ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದ್ದು ಇಂಗ್ಲೆಂಡ್ಗೆ ದೊಡ್ಡ ಹೊಡೆತ ನೀಡಿತು. ಒಂದೆಡೆ ಬ್ರೆಡನ್ ಕಾರ್ಸ್ 39 ರನ್ಗಳೊಂದಿಗೆ ಹೋರಾಡಿದರೂ, ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಜೋಫ್ರಾ ಆರ್ಚರ್ (3) ಅವರನ್ನು ಸ್ಟಾರ್ಕ್ ಮತ್ತು ಜೋಶ್ ಟಂಗ್ (1) ಅವರನ್ನು ಸ್ಕಾಟ್ ಬೋಲ್ಯಾಂಡ್ ಔಟ್ ಮಾಡಿದರು. ಇದರಿಂದ ಇಂಗ್ಲೆಂಡ್ ಗುರಿಯಿಂದ 86 ರನ್ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಇಂದು ಇಂಗ್ಲೆಂಡ್ಗೆ ಮೊದಲು ನಷ್ಟವಾಗಿದ್ದು 60 ರನ್ ಗಳಿಸಿದ್ದ ಜೇಮಿ ಸ್ಮಿತ್ ಅವರ ವಿಕೆಟ್. ಜೇಮಿ ಸ್ಮಿತ್ ಮತ್ತು ವಿಲ್ ಜಾಕ್ಸ್ ಏಳನೇ ವಿಕೆಟ್ಗೆ 91 ರನ್ಗಳ ಜೊತೆಯಾಟವಾಡಿ ಇಂಗ್ಲೆಂಡ್ಗೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ 60 ರನ್ ಗಳಿಸಿದ್ದ ಸ್ಮಿತ್ ಅವರನ್ನು ಊಟದ ವಿರಾಮಕ್ಕೂ ಮುನ್ನ ಔಟ್ ಮಾಡಿದ ಮಿಚೆಲ್ ಸ್ಟಾರ್ಕ್, ಆಸೀಸ್ ಗೆಲುವನ್ನು ಸುಲಭಗೊಳಿಸಿದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ತಲಾ ಮೂರು ವಿಕೆಟ್ ಪಡೆದರು.
ಇಂಗ್ಲೆಂಡ್ಗೆ ಆರಂಭಿಕ ಆಘಾತ
ನಿನ್ನೆ ನಾಲ್ಕನೇ ದಿನ 435 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಆರಂಭದಲ್ಲೇ ಓಪನರ್ ಬೆನ್ ಡಕೆಟ್ (4) ವಿಕೆಟ್ ಕಳೆದುಕೊಂಡಿತು. ಓಲಿ ಪೋಪ್ (17) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇಬ್ಬರನ್ನೂ ಪ್ಯಾಟ್ ಕಮಿನ್ಸ್ ಪೆವಿಲಿಯನ್ಗೆ ಕಳುಹಿಸಿದರು. ಆದರೆ, ಜಾಕ್ ಕ್ರಾಲಿ ಮತ್ತು ಜೋ ರೂಟ್ ಉತ್ತಮವಾಗಿ ಆಡಿದ್ದರಿಂದ ಇಂಗ್ಲೆಂಡ್ಗೆ ಸಣ್ಣ ಭರವಸೆ ಮೂಡಿತು. ಇಬ್ಬರೂ ಸೇರಿ ಇಂಗ್ಲೆಂಡ್ ಸ್ಕೋರನ್ನು 100ರ ಗಡಿ ದಾಟಿಸಿದರು. ಆದರೆ ನಾಲ್ಕನೇ ದಿನ ಚಹಾ ವಿರಾಮದ ನಂತರ ಜೋ ರೂಟ್ (39) ಅವರನ್ನು ಔಟ್ ಮಾಡಿದ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ನ ಭರವಸೆಯನ್ನು ಮುರಿದರು.
ಹ್ಯಾರಿ ಬ್ರೂಕ್ ಆಕ್ರಮಣಕಾರಿ ಆಟವನ್ನು ಬದಿಗಿಟ್ಟು ನಿಂತರೂ, ನೇಥನ್ ಲಯಾನ್ಗೆ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿ ವಿಕೆಟ್ ಒಪ್ಪಿಸಿದರು. 30 ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಔಟಾದ ಬೆನ್ನಲ್ಲೇ, ನಾಯಕ ಬೆನ್ ಸ್ಟೋಕ್ಸ್ (5) ಮತ್ತು ಜಾಕ್ ಕ್ರಾಲಿ (85) ಅವರನ್ನೂ ಲಯನ್ ಔಟ್ ಮಾಡಿದರು. ಇದರಿಂದ 177-3 ರಿಂದ ಇಂಗ್ಲೆಂಡ್ 194-6 ಕ್ಕೆ ಕುಸಿಯಿತು. ಆಸೀಸ್ ಪರ ಪ್ಯಾಟ್ ಕಮಿನ್ಸ್ ಮತ್ತು ನಾಥನ್ ಲಯಾನ್ ತಲಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮುನ್ನ, ಆಸೀಸ್ ನಾಲ್ಕನೇ ದಿನವನ್ನು 271-4 ಎಂಬ ಬಲಿಷ್ಠ ಸ್ಥಿತಿಯಲ್ಲಿ ಆರಂಭಿಸಿತ್ತು. 170 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಮತ್ತು 72 ರನ್ ಗಳಿಸಿದ್ದ ಅಲೆಕ್ಸ್ ಕ್ಯಾರಿ ಆಸೀಸ್ ಮುನ್ನಡೆಯನ್ನು 400ರ ಗಡಿ ದಾಟಿಸಿದರು. ಆದರೆ ನಂತರ ಬಂದ ಯಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಜೋಶ್ ಇಂಗ್ಲಿಸ್ (10), ಕಮಿನ್ಸ್ (6), ಲಿಯಾನ್ (0), ಮತ್ತು ಬೋಲ್ಯಾಂಡ್ (1) ಬೇಗನೆ ಔಟಾದರು. ಮಿಚೆಲ್ ಸ್ಟಾರ್ಕ್ ಏಳು ರನ್ಗಳೊಂದಿಗೆ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಬ್ರೆಡನ್ ಕಾರ್ಸ್ ಮೂರು ಮತ್ತು ಜೋಶ್ ಟಂಗ್ ನಾಲ್ಕು ವಿಕೆಟ್ ಪಡೆದರು.
ಸ್ಕೋರ್: ಆಸ್ಟ್ರೇಲಿಯಾ 371 ಮತ್ತು 349, ಇಂಗ್ಲೆಂಡ್ 286 ಮತ್ತು 352.

