ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 25.20 ಕೋಟಿ ರುಪಾಯಿಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದು, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ವಿದೇಶಿ ಆಟಗಾರ ಎಂಬ ಹೊಸ ದಾಖಲೆ ಬರೆದಿದ್ದಾರೆ.

ಅಬುಧಾಬಿ: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ದಾಖಲೆ ಮೊತ್ತಕ್ಕೆ ಬಿಡ್ ಆಗಿದ್ದಾರೆ. ಕ್ಯಾಮರೋನ್ ಗ್ರೀನ್‌ಗೆ 25.20 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಯಶಸ್ವಿಯಾಗಿದೆ.

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಕ್ಯಾಮರೋನ್ ಗ್ರೀನ್ ಅವರನ್ನು ಖರೀದಿಸಲು ಆರಂಭದಿಂದ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಪೈಪೋಟಿ ನಡೆಸಿದವು. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 13.60 ಕೋಟಿ ವರೆಗೂ ಬಿಡ್ ಮಾಡಿತು. ಇದಾದ ನಂತರ ಕೆಕೆಆರ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಪೈಪೋಟಿ ನೀಡಲಾರಂಭಿಸಿತು. ಅಂತಿಮವಾಗಿ ಕ್ಯಾಮರೋನ್ ಗ್ರೀನ್ 25.20 ಕೋಟಿ ರುಪಾಯಿಗೆ ಕೆಕೆಆರ್ ಪಾಲಾದರು.

Scroll to load tweet…

ಹೊಸ ದಾಖಲೆ ಬರೆದ ಗ್ರೀನ್:

ಕ್ಯಾಮರೋನ್ ಗ್ರೀನ್ 25.20 ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗುವ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ವಿದೇಶಿ ಆಟಗಾರ ಎನ್ನುವ ದಾಖಲೆಗೆ ಕ್ಯಾಮರೋನ್ ಗ್ರೀನ್ ಪಾತ್ರರಾದರು. ಈ ಮೊದಲು 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಸ್ಟಾರ್ಕ್ ಹಿಂದಿಕ್ಕಿ ಗ್ರೀನ್ ಐಪಿಎಲ್‌ನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ಡೇವಿಡ್ ಮಿಲ್ಲರ್ 2 ಕೋಟಿ ರುಪಾಯಿ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.

ಸರ್ಫರಾಜ್, ಪೃಥ್ವಿ ಅನ್‌ಸೋಲ್ಡ್

ಆಸ್ಟ್ರೇಲಿಯಾ ಮೂಲದ ಸ್ಪೋಟಕ ಬ್ಯಾಟರ್ ಜೇಕ್‌ಪ್ರೇಸರ್ ಮೆಕ್‌ಗರ್ಕ್‌, ಮುಂಬೈ ಮೂಲದ ಪೃಥ್ವಿ ಶಾ, ಸರ್ಫರಾಜ್ ಖಾನ್ ಅನ್‌ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದರು.