ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್‌ ಹಾಗೂ ಮೆಟ್ಟಿಲು ಚಿಕ್ಕದಾಗಿವೆ. ಕಟ್ಟಡಗಳಿಗೆ ನಿಯಮ ಪ್ರಕಾರ ಸೆಟ್‌ಬ್ಯಾಕ್‌ ಬಿಟ್ಟಿಲ್ಲ, ಸ್ಟೇಡಿಯಂನ ಸಂಪೂರ್ಣ ಕಾಂಪೌಂಡ್‌ ಅವೈಜ್ಞಾನಿವಾಗಿದೆ... ಹೀಗಂತ ಶಿಫಾರಸು ವರದಿಯಲ್ಲಿ ತಿಳಿಸಿದೆ.

ಬೆಂಗಳೂರು (ಡಿ.24): ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್‌ ಹಾಗೂ ಮೆಟ್ಟಿಲು ಚಿಕ್ಕದಾಗಿವೆ. ಕಟ್ಟಡಗಳಿಗೆ ನಿಯಮ ಪ್ರಕಾರ ಸೆಟ್‌ಬ್ಯಾಕ್‌ ಬಿಟ್ಟಿಲ್ಲ, ಸ್ಟೇಡಿಯಂನ ಸಂಪೂರ್ಣ ಕಾಂಪೌಂಡ್‌ ಅವೈಜ್ಞಾನಿವಾಗಿದೆ... ಹೀಗಂತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯಾವಳಿ ನಡೆಸುವ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ನೇತೃತ್ವದ ಸಮಿತಿ ತನ್ನ ಶಿಫಾರಸು ವರದಿಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಮಂದ್ಯಾವಳಿ ನಡೆಸುವುದಕ್ಕೆ ಅನುಮತಿ ಕೇಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವುದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಸದಸ್ಯರು ಸೋಮವಾರ ಕ್ರೀಡಾಂಗಣಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದ್ದು, ಕ್ರಿಕೆಟ್‌ ಪಂದ್ಯಾವಳಿ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಶಿಫಾರಸು: ಸ್ಟೇಡಿಯಂನ ಎಲ್ಲಾ ಗೇಟ್ ತುಂಬಾ ಚಿಕ್ಕದಾಗಿವೆ. ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ಟೇಡಿಯಂ ಸುತ್ತ ಜಾಗ ಇಲ್ಲ. ಜನ ಬಂದರೆ ಅವರ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಇಲ್ಲ, ಕ್ರಿಕೆಟ್‌ ತಂಡದ ವಾಹನಗಳ ಪಾರ್ಕಿಂಗ್‌ಗೂ ಸ್ಟೇಡಿಯಂನಲ್ಲಿ ಅವಕಾಶ ಇಲ್ಲ, ಕ್ರೀಡಾಂಗಣದ ಒಳಭಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಸೆಟ್‌ಬ್ಯಾಕ್‌ ಬಿಟ್ಟಿಲ್ಲ.

ಸ್ಟೇಡಿಯಂಗೆ ಎಲ್ಲೂ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲ. ಸ್ಟೇಡಿಯಂ ಸುತ್ತಲೂ ನಿರ್ಮಾಣ ಆಗಿರುವ ತಡೆಗೋಡೆ ಅವೈಜ್ಞಾನಿಕವಾಗಿದೆ. ಕಾಲ್ತುಳಿತ ನಡೆದ ಬಳಿಕ ಸ್ಟೇಡಿಯಂನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂದ್ಯ ನಡೆಸುವ ದೃಷ್ಟಿಯಲ್ಲಿ ಸ್ಟೇಡಿಯಂ ಸದ್ಯದ ವಾತಾವಾರಣ ಪೂರಕವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಿತಿ ಹೇಳಿದ್ದೇನು?

- ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್‌ ಹೋಗಲು ಸ್ಟೇಡಿಯಂ ಸುತ್ತ ಸಮರ್ಪಕ ಜಾಗ ಇಲ್ಲ
- ಜನರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲ, ಸ್ಟೇಡಿಯಂ ಕಟ್ಟಡಕ್ಕೆ ಸೆಟ್‌ಬ್ಯಾಕ್‌ ಬಿಟ್ಟಿಲ್ಲ
- ಸ್ಟೇಡಿಯಂಗೆ ಎಲ್ಲೂ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲ, ತಡೆಗೋಡೆ ಅವೈಜ್ಞಾನಿಕ
- ಕಾಲ್ತುಳಿತ ಬಳಿಕವೂ ಸ್ಟೇಡಿಯಂನಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಿಲ್ಲ
- ಪಂದ್ಯ ನಡೆಸುವ ದೃಷ್ಟಿಯಲ್ಲಿ ಸ್ಟೇಡಿಯಂ ಸದ್ಯದ ವಾತಾವಾರಣ ಪೂರಕವಾಗಿಲ್ಲ
- ಸೂಕ್ತ ಬದಲಾವಣೆಗಳು ಆಗುವವರೆಗೆ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಆಗದು