ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ 'ದೋಸೆ, ಇಡ್ಲಿ' ಹಾಡನ್ನು ಪ್ರಸಾರ ಮಾಡಿದ್ದಕ್ಕೆ ಸಿಎಸ್‌ಕೆ ತಂಡವು ಬಿಸಿಸಿಐಗೆ ದೂರು ನೀಡಿದೆ. ಈ ಹಾಡು ತಮ್ಮ ಆಟಗಾರರನ್ನು ಮತ್ತು ತಮಿಳುನಾಡಿನ ಗುರುತನ್ನು ಅಣಕಿಸುವಂತಿದೆ ಎಂದು ಸಿಎಸ್‌ಕೆ ಆರೋಪಿಸಿದ್ದು, ಈ ವಿವಾದದ ಹಿನ್ನೆಲೆ ಕಳೆದ ವರ್ಷ ಜಿತೇಶ್ ಶರ್ಮಾ ಅವರ ವಿಡಿಯೋದಿಂದ ಆರಂಭವಾಗಿತ್ತು.

ಚೆನ್ನೈ: ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಪ್ರಸಾರ ಮಾಡಲಾದ ‘ದೋಸೆ, ಇಡ್ಲಿ, ಸಾಂಬಾರ್‌, ಚಟ್ನಿ’ ಹಾಡಿನ ವಿಚಾರದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಬಿಸಿಸಿಐಗೆ ದೂರು ಸಲ್ಲಿಸಿದೆ. ಈ ಹಾಡು ತಮ್ಮ ಆಟಗಾರರನ್ನು ವ್ಯಂಗ್ಯ ಮಾಡುವಂತಿದ್ದವು ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಗುರುತನ್ನು ಅಣಕಿಸುವಂತೆ ಈ ಹಾಡು ಬಳಸಲಾಗಿದೆ ಎಂಬುದು ಸಿಎಸ್‌ಕೆ ಆರೋಪ.

ದಕ್ಷಿಣ ಭಾರತವನ್ನು ವ್ಯಂಗ್ಯ ಮಾಡುವ ಕೆಲ ಮೀಮ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುವ ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ’ ಎಂಬ ವೈರಲ್‌ ಹಾಡನ್ನು ಏ.5ರ ಪಂದ್ಯದ ಸಮಯದಲ್ಲಿ ಹಾಕಲಾಗಿತ್ತು. ಆದರೆ ಇದು ಒಳ್ಳೆಯ ಅಭಿರುಚಿಯ ಲಕ್ಷಣ ಅಲ್ಲ ಎಂದು ಸಿಎಸ್‌ಕೆ ತನ್ನ ದೂರಿನಲ್ಲಿ ತಿಳಿಸಿದೆ. ಐಪಿಎಲ್‌ನ ಉನ್ನತ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ದೂರಿನ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.

ಈ ವಿಚಾರವಾಗಿ ವಿಶ್ವನಾಥನ್‌ ಪ್ರತಿಕ್ರಿಯಿಸಿದ್ದು, ‘ಸಾಮಾನ್ಯವಾಗಿ ತವರು ತಂಡವನ್ನು ಬೆಂಬಲಿಸುವ ಸಲುವಾಗಿ ಡಿಜೆಗಳು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಎಲ್ಲವೂ ವಿಭಿನ್ನವಾಗಿತ್ತು. ದೊಡ್ಡ ಹೊಡೆತ, ವಿಕೆಟ್‌ ಆದಾಗ ಆಟಗಾರರನ್ನು ಹುರಿದುಂಬಿಸುವುದು ಡಿಜೆ ಕೆಲಸವೇ ಹೊರತು ಎದುರಾಳಿಗಳನ್ನು ದುರ್ಬಲಗೊಳಿಸುವುದು, ಅವಮಾನಿಸುವುದು ಅಲ್ಲ’ ಎಂದು ಹೇಳಿದ್ದಾರೆ.

ಸಿಎಸ್‌ಕೆ-ಆರ್‌ಸಿಬಿ ವೈರತ್ವ ಹೊಸತಲ್ಲ:

ಉಭಯ ತಂಡಗಳು, ಅಭಿಮಾನಿಗಳ ನಡುವಿನ ವೈರತ್ವ ಹೊಸದೇನಲ್ಲ. ಆರ್‌ಸಿಬಿ-ಸಿಎಸ್‌ಕೆ ಪಂದ್ಯವೆಂದರೆ ಅದು ಕೊಹ್ಲಿ ವರ್ಸಸ್‌ ಧೋನಿ, ಕರ್ನಾಟಕ ವರ್ಸಸ್‌ ತಮಿಳುನಾಡು ಎಂಬಂತೆ ಬಿಂಬಿತವಾಗುವುದು ಸಹಜ. ಈಗ ಹಾಡಿನ ವಿಚಾರದಲ್ಲೂ ಉಭಯ ತಂಡಗಳ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ವಾಗ್ವಾದ ನಡೆಯುತ್ತಿದೆ.

ವಿವಾದ ಕಳೆದ ವರ್ಷವೇ ಶುರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಾಡು 2 ತಂಡಗಳ ಅಭಿಮಾನಿಗಳ ನಡುವೆ ಕಳೆದ ವರ್ಷವೇ ವಿವಾದಕ್ಕೆ ಕಾರಣವಾಗಿತ್ತು. ಸಂಗೀತಗಾರ ಗಾನ ಅಪ್ಪು ಈ ಹಾಡನ್ನು ಸಂಯೋಜಿಸಿರುವ ಈ ಹಾಡನ್ನು ಕಳೆದ ವರ್ಷ ಆರ್‌ಸಿಬಿಯ ಜಿತೇಶ್‌ ಶರ್ಮಾ ಹಾಡಿದ್ದರು. ಆ ವಿಡಿಯೋವನ್ನು ಆರ್‌ಸಿಬಿ ಪೋಸ್ಟ್‌ ಮಾಡಿತ್ತು. ಇದು ಸಿಎಸ್‌ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಜಿತೇಶ್‌ ಔಟಾಗಿ ಪೆವಿಲಿಯನ್‌ಗೆ ಮರಳುತ್ತಿದ್ದಾಗ ಕ್ರೀಡಾಂಗಣದಲ್ಲಿ ಈ ಹಾಡನ್ನು ಹಾಕಲಾಗಿತ್ತು. ಅದಕ್ಕೆ ಪ್ರತಿಯಾಗಿ ಈ ಬಾರಿ ಚಿನ್ನಸ್ವಾಮಿಯಲ್ಲಿ ಹಾಡನ್ನು ಪ್ಲೇ ಮಾಡಲಾಗಿದೆ.

ಇಡ್ಲಿ ದೋಸೆ ಚಟ್ನಿ ಬಗ್ಗೆ ಸ್ಪಷ್ಟನೆ ನೀಡಿದ್ದ ಜಿತೇಶ್ ಶರ್ಮಾ:

ಕಳೆದ ವರ್ಷ ನವೆಂಬರ್‌ನಲ್ಲಿ ಈ ದೋಸೆ, ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ ಹಾಡಿದ್ದು ಹೇಗೆ? ಯಾವ ಹಿನ್ನೆಲೆಯಲ್ಲಿ ಹಾಡಿದ್ದು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಮಾಧ್ಯಮದವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆಯೇ ನಿಮಗೆ ಏನು ಇಷ್ಟವಾಗುತ್ತದೆ ಎಂದು ಕೇಳಿದರು. ಆಗ ನಾನು ಎಳನೀರು ಇತ್ಯಾದಿ ಎಂದು ಹೇಳಿದೆ. ಇದನ್ನು ಉಳಿದವರು ಎಲ್ಲಾ ಹೇಳಿದ್ದಾರೆ, ಬೇರೇನು ಇಷ್ಟ ಎಂದು ಕೇಳಿದಾಗ, ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುವ ದೋಸೆ ಇಡ್ಲಿ ಬಗ್ಗೆ ಹೇಳಿದೆ. ಆಗ ಅಲ್ಲೇ ಇರುವ ಹುಡುಗನೊಬ್ಬ, ಈಗ ದೋಸೆ ಇಡ್ಲಿ ಸಾಂಬರ್ ಚಟ್ನಿ ಚಟ್ನಿ ರೀಲ್ಸ್ ವೈರಲ್ ಆಗುತ್ತಿದೆ. ನೀವು ಒಮ್ಮೆ ಹೇಳಿ ಅಂದ. ಅದರ ಹಿನ್ನೆಲೆ ಗೊತ್ತಿಲ್ಲದೆ ನಾನು ಆ ಹಾಡು ಹಾಡಿದೆ. ಇದಾದ ಮೇಲೆ ಚೆನ್ನೈನಲ್ಲಿ ಔಟಾಗಿ ಪೆವಿಲಿಯನ್‌ಗೆ ವಾಪಾಸ್ಸಾಗುವ ವೇಳೆಯಲ್ಲಿ ಅದೇ ಹಾಡು ಸ್ಟೇಡಿಯಂನಲ್ಲಿ ಹಾಕಿದರು ಎಂದು ಕಳೆದ ವರ್ಷದ ಘಟನೆಯನ್ನು ಜಿತೇಶ್ ಶರ್ಮಾ ಮೆಲುಕು ಹಾಕಿದ್ದಾರೆ.

ಹೀಗಿತ್ತು ನೋಡಿ ಜಿತೇಶ್ ಶರ್ಮಾ ಆಡಿದ ಮಾತು

Scroll to load tweet…