ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ (96) ಹಾಗೂ ಕರುಣ್ ನಾಯರ್ (73) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಮೊದಲ ದಿನದಂತ್ಯಕ್ಕೆ 5 ವಿಕೆಟ್ಗೆ 295 ರನ್ ಗಳಿಸಿದೆ. ಶತಕ ವಂಚಿತರಾದ ಪಡಿಕ್ಕಲ್ ನಿರ್ಗಮನದ ನಂತರ, ಆರ್. ಸ್ಮರಣ್, ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾದರು.
ರಾಜ್ಕೋಟ್: ವಿಂಡೀಸ್ ವಿರುದ್ಧ 2ನೇ ಟೆಸ್ಟ್ ಮುಗಿಯುತ್ತಿದ್ದಂತೆ ದೆಹಲಿಯಿಂದ ರಾಜ್ಕೋಟ್ ತಲುಪಿ, ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್, ಆಕರ್ಷಕ 96 ರನ್ ಗಳಿಸಿ ಮೊದಲ ದಿನ ಕರ್ನಾಟಕ ಮೇಲುಗೈ ಸಾಧಿಸಲು ನೆರವಾದರು. ದೇವದತ್ ಪಡಿಕ್ಕಲ್ ಕೇವಲ ನಾಲ್ಕು ರನ್ ಅಂತರದಲ್ಲಿ ಶತಕ ಸಿಡಿಸುವ ಅವಕಾಶ ಮಿಸ್ ಮಾಡಿಕೊಂಡರು. ಇನ್ನು ಕರುಣ್ ನಾಯರ್ 73 ಹಾಗೂ ಆರ್.ಸ್ಮರಣ್ ಔಟಾಗದೆ 66 ರನ್ ಗಳಿಸಿದ ಪರಿಣಾಮ, 1ನೇ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್ಗೆ 295 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ, 26 ರನ್ಗೆ ತನ್ನ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ 2, ನಿಕಿನ್ ಜೋಸ್ 12 ರನ್ ಗಳಿಸಿ ಔಟಾದರು. ತಂಡ ಸಂಕಷ್ಟದಲ್ಲಿದ್ದಾಗ 3ನೇ ವಿಕೆಟ್ಗೆ ಜೊತೆಯಾದ ಪಡಿಕ್ಕಲ್ ಹಾಗೂ ಕರುಣ್, 146 ರನ್ ಜೊತೆಯಾಟ ವಾಡಿದರು. ಇವರಿಬ್ಬರ ಜೊತೆಯಾಟದಿಂದ ರಾಜ್ಯ ತಂಡ ಚೇತರಿಕೆ ಕಂಡಿತು.
ರಾಜ್ಯ ತಂಡಕ್ಕೆ ವಾಪಾಸ್ಸಾದ ಕರುಣ್ ನಾಯರ್
2 ಋತುಗಳ ಬಳಿಕ ಕರ್ನಾಟಕ ತಂಡಕ್ಕೆ ವಾಪಸಾದ ಕರುಣ್ ಆಕರ್ಷಕ ಬ್ಯಾಟಿಂಗ್ ನಡೆಸಿ 126 ಎಸೆತದಲ್ಲಿ 9 ಬೌಂಡರಿಗಳೊಂದಿಗೆ 73 ರನ್ ಗಳಿಸಿದರು. 141 ಎಸೆತದಲ್ಲಿ 11 ಬೌಂಡರಿಯೊಂದಿಗೆ 96 ರನ್ ಗಳಿಸಿ ಪಡಿಕ್ಕಲ್ ಔಟಾಗುವ ಮೂಲಕ ಶತಕ ವಂಚಿತರಾದರು. ಕೇವಲ 22 ರನ್ ಅಂತರದಲ್ಲಿ
ಇವರಿಬ್ಬರ ವಿಕೆಟ್ ಪತನಗೊಂಡ ಕಾರಣ, ಕರ್ನಾಟಕದ ಮೇಲೆ ಒತ್ತಡ ಬಿತ್ತು. ತಂಡದ ಮೊತ್ತ 214 ರನ್ ಆಗಿದ್ದಾಗ ವಿಕೆಟ್ ಕೀಪರ್ ಕೆ.ಎಲ್.ಶ್ರೀಜಿತ್ (5) ಸಹ ಔಟಾದರು. ಈ ಹಂತದಲ್ಲಿ ಕ್ರೀಸ್ ಹಂಚಿಕೊಂಡ ಆರ್.ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್, ದಿನದಂತ್ಯದ ವರೆಗೂ ಕ್ರೀಸ್ ಕಾಯ್ದುಕೊಂಡು ರಾಜ್ಯಕ್ಕೆ ಆಸರೆಯಾದರು. ಮುರಿಯದ 6ನೇ ವಿಕೆಟ್ಗೆ 81 ರನ್ ಸೇರಿಸಿರುವ ಇವರಿಬ್ಬರು ತಂಡದ ಮೊತ್ತವನ್ನು 400ರ ಗಡಿ ದಾಟಿಸುವ ನಿರೀಕ್ಷೆಯಲ್ಲಿದ್ದಾರೆ. ಸ್ಮರಣ್ ಔಟಾಗದೆ 66, ಶ್ರೇಯಸ್ ಔಟಾಗದೆ 38 ರನ್ ಗಳಿಸಿದ್ದಾರೆ. ಸೌರಾಷ್ಟ್ರ ಪರ ಧರ್ಮೇಂದ್ರ ಜಡೇಜಾ 4 ವಿಕೆಟ್ ಕಬಳಿಸಿದರು. ಈ ಇನ್ನಿಂಗ್ಸ್ನಲ್ಲಿ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 400 ವಿಕೆಟ್ ಮೈಲುಗಲ್ಲು ಸಹ ತಲುಪಿದರು.
ಸ್ಕೋರ್: ಕರ್ನಾಟಕ ಮೊದಲ ದಿನದಂತ್ಯಕ್ಕೆ 295/5 (ಪಡಿಕ್ಕಲ್ 96, ಕರುಣ್ 73, ಸ್ಮರಣ್ 66*, ಶ್ರೇಯಸ್ 38, ಧಮೇಂದ್ರ 4/100)


