ಐಪಿಎಲ್ ಗೆದ್ದ ಕೆಲವೇ ತಿಂಗಳಲ್ಲಿ ರಜತ್ ಪಾಟೀದಾರ್ ನಾಯಕತ್ವದ ಮಧ್ಯಪ್ರದೇಶ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿತ್ತು. ಇದೀಗ ದುಲೀಪ್ ಟ್ರೋಫಿಯಲ್ಲೂ ಕೇಂದ್ರ ವಲಯ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. 

ಬೆಂಗಳೂರು: 2025ರ ಐಪಿಎಲ್ ಟೂರ್ನಿಯಲ್ಲಿ 18 ವರ್ಷಗಳ ಆರ್‌ಸಿಬಿ ಟ್ರೋಫಿ ಬರ ನೀಗಿಸಿದ್ದ ರಜತ್ ಪಾಟೀದಾರ್ ಇದೀಗ, ಒಂದು ವರ್ಷ ತುಂಬುವುದರೊಳಗಾಗಿ ನಾಯಕನಾಗಿ ಮೂರನೇ ಬಾರಿಗೆ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, 2024ರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಮಧ್ಯಪ್ರದೇಶ ತಂಡವು ಫೈನಲ್ ಪ್ರವೇಶಿಸಿತ್ತು. ಇದಾದ ಕೆಲವೇ ತಿಂಗಳಲ್ಲಿ ಆರ್‌ಸಿಬಿ ತಂಡವನ್ನು ನಾಯಕನಾದ ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದೀಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ನಾಯಕನಾಗಿ ಕೇಂದ್ರ ವಲಯವನ್ನು ಮುನ್ನಡೆಸಿದ ರಜತ್ ಪಾಟೀದಾರ್, ಫೈನಲ್‌ಗೆ ಕೊಂಡೊಯ್ದಿದ್ದಾರೆ. ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯವು, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರನ್ನೊಳಗೊಂಡು ಪಶ್ಚಿಮ ವಲಯದ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ವಲಯಕ್ಕೆ ಫೈನಲ್‌ನಲ್ಲಿ ಸೆಂಟ್ರಲ್ ಝೋನ್ ಚಾಲೆಂಜ್!

ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ವಲಯ ಫೈನಲ್ ಪ್ರವೇಶಿಸಿದೆ. ಪಶ್ಚಿಮ ವಲಯದ ವಿರುದ್ಧದ ಪಂದ್ಯ ಡ್ರಾ ಆಗಿದ್ದರೂ, ಮೊದಲ ಇನ್ನಿಂಗ್ಸ್‌ನ ಮುನ್ನಡೆಯ ಆಧಾರದ ಮೇಲೆ ಸೆಂಟ್ರಲ್ ಝೋನ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಶ್ಚಿಮ ವಲಯದ 438 ರನ್‌ಗಳ ಮೊದಲ ಇನ್ನಿಂಗ್ಸ್‌ಗೆ ಪ್ರತಿಯಾಗಿ ಸೆಂಟ್ರಲ್ ಝೋನ್ 600 ರನ್‌ ಗಳಿಸಿತ್ತು. ಈ ಮೂಲಕ 162 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ನಂತರ ಪಶ್ಚಿಮ ವಲಯ ಎರಡನೇ ಇನ್ನಿಂಗ್ಸ್ ಆರಂಭಿಸಿದರೂ, 8 ವಿಕೆಟ್‌ಗೆ 216 ರನ್‌ಗಳಿಸಿದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಫೈನಲ್‌ನಲ್ಲಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯವು ದಕ್ಷಿಣ ವಲಯವನ್ನು ಎದುರಿಸಲಿದೆ. ಇನ್ನೊಂದೆಡೆ ಉತ್ತರ ವಲಯದ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದರಿಂದ ದಕ್ಷಿಣ ವಲಯ ಫೈನಲ್‌ಗೆ ಪ್ರವೇಶಿಸಿದೆ. ಆ ಸೆಮಿಫೈನಲ್ ಪಂದ್ಯ ಕೂಡ ಡ್ರಾ ಆಗಿತ್ತು. ಸೆಪ್ಟೆಂಬರ್‌ 11ರಿಂದ ಫೈನಲ್ ಪಂದ್ಯವು ನಡೆಯಲಿದೆ.

Scroll to load tweet…

ಪಶ್ಚಿಮ ವಲಯದ ವಿರುದ್ಧ ಕೊನೆಯ ದಿನ 8 ವಿಕೆಟ್‌ಗೆ 556 ರನ್‌ಗಳೊಂದಿಗೆ ಬ್ಯಾಟಿಂಗ್‌ಗೆ ಇಳಿದ ಕೇಂದ್ರ ವಲಯವು 34 ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ ಎರಡು ವಿಕೆಟ್ ಕಳೆದುಕೊಂಡಿತು. ಇಂದು ಯಶ್ ಠಾಕೂರ್ (21), ಖಲೀಲ್ ಅಹ್ಮದ್ (0) ವಿಕೆಟ್‌ಗಳನ್ನು ಕಳೆದುಕೊಂಡರು. ಮತ್ತೊಂದು ತುದಿಯಲ್ಲಿ ಸರನ್ಶ್ ಜೈನ್ (63) ಅಜೇಯರಾಗಿ ಉಳಿದರು. ಧರ್ಮೇಂದ್ರ ಸಿನ್ಹ್ ಜಡೇಜ ಪಶ್ಚಿಮ ವಲಯ ಪರವಾಗಿ ನಾಲ್ಕು ವಿಕೆಟ್ ಪಡೆದರು. ಆಯುಷ್ ಪಾಂಡೆ (40), ದಾನಿಶ್ ಮಲೇವರ್ (76), ಶುಭಮ್ ಶರ್ಮಾ (96), ನಾಯಕ ರಜತ್ ಪಟಿದಾರ್ (77), ಯಶ್ ರಾಥೋಡ್ (2), ಉಪೇಂದ್ರ ಯಾದವ್ (59), ಹರ್ಷಲ್ ದುಬೆ (63), ದೀಪಕ್ ಚಾಹರ್ (33) ಅವರ ವಿಕೆಟ್‌ಗಳನ್ನು ನಿನ್ನೆ ಸೆಂಟ್ರಲ್ ವಲಯ ಕಳೆದುಕೊಂಡಿತ್ತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಪಶ್ಚಿಮ ವಲಯದ ಪರ ಯಶಸ್ವಿ ಜೈಸ್ವಾಲ್ (64), ತನುಷ್ ಕೊಟ್ಯಾನ್ (40), ಆರ್ಯ ದೇಸಾಯಿ (35) ಮಿಂಚಿದರು. ಸರನ್ಶ್ ಜೈನ್ ಐದು ವಿಕೆಟ್ ಪಡೆದರು.

ಇದಕ್ಕೂ ಮುನ್ನ, ಮೊದಲ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ವಲಯದ ಪರ ಋತುರಾಜ್ ಗಾಯಕ್ವಾಡ್ (184) ಶತಕ ಬಾರಿಸಿದ್ದರು. ತನುಷ್ ಕೊಟ್ಯಾನ್(76), ಶಾರ್ದೂಲ್ ಠಾಕೂರ್ (64) ಕೂಡ ಉತ್ತಮ ಪ್ರದರ್ಶನ ನೀಡಿದ್ದರು. 6 ವಿಕೆಟ್‌ಗೆ 363 ರನ್‌ಗಳೊಂದಿಗೆ ಪಶ್ಚಿಮ ವಲಯ ಎರಡನೇ ದಿನ ಕ್ರೀಸ್‌ಗೆ ಇಳಿದಿತ್ತು. ಇನ್ನೂ 75 ರನ್‌ಗಳನ್ನು ಸೇರಿಸುವಷ್ಟರಲ್ಲಿ ಉಳಿದ ವಿಕೆಟ್‌ಗಳನ್ನು ಕಳೆದುಕೊಂಡಿತು. ಸರನ್ಶ್ ಜೈನ್, ಹರ್ಷಲ್ ದುಬೆ ತಲಾ ಮೂರು ವಿಕೆಟ್ ಪಡೆದರು. ತನುಷ್, ಶಾರ್ದೂಲ್ ಜೊತೆಗೆ ಧರ್ಮೇಂದ್ರ ಜಡೇಜ (1), ನಾಗ್ವಾಸ್ವಾಲ (3) ಅವರ ವಿಕೆಟ್‌ಗಳನ್ನು ಎರಡನೇ ದಿನ ಪಶ್ಚಿಮ ವಲಯ ಕಳೆದುಕೊಂಡಿತು.