ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟವಾಗಿದ್ದು, ಕಳಪೆ ಫಾರ್ಮ್‌ನಿಂದಾಗಿ ಉಪನಾಯಕ ಶುಭ್‌ಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಗಿಲ್ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದ್ದು, ಈ ಆಯ್ಕೆ ಬಗ್ಗೆ ಕೋಚ್ ಗೌತಮ್ ಗಂಭೀರ್ ಮೌನ ವಹಿಸಿರುವುದು ಚರ್ಚೆಗೆ ಕಾರಣವಾಗಿದೆ.
ಮುಂಬೈ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಆದರೆ ಅಚ್ಚರಿ ಎನ್ನುವಂತೆ ಭಾರತ ಟಿ20 ತಂಡದ ಉಪನಾಯಕರಾಗಿದ್ದ ಶುಭ್‌ಮನ್ ಗಿಲ್ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಕಳೆದ ಏಷ್ಯಾಕಪ್ ಟೂರ್ನಿಯಿಂದ ಭಾರತ ಟಿ20 ತಂಡಕ್ಕೆ ಉಪನಾಯಕರಾಗಿ ಕಮ್‌ಬ್ಯಾಕ್ ಮಾಡಿದ್ದ ಗಿಲ್, ಚುಟುಕು ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದರ ಬೆನ್ನಲ್ಲೇ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಆರಂಭದಿಂದಲೂ ಶುಭ್‌ಮನ್ ಗಿಲ್ ಅವರನ್ನು ಬೆಂಬಲಿಸುತ್ತಲೇ ಬಂದಿರುವ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಿಲ್ ಭಾರತ ಟಿ20 ತಂಡದಿಂದ ಹೊರಬಿದ್ದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗಂಭೀರ್ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದು, ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಿಲ್ ಔಟ್, ಗಂಭೀರ್ ಸೈಲೆಂಟ್!
ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಗಿಲ್ ಅವರನ್ನು ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಗಿಲ್‌ಗೆ ಭಾರತ ಟಿ20 ತಂಡದಲ್ಲಿ ಭದ್ರವಾಗಿ ನೆಲೆಯೂರಲು ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಗಿಲ್ ಬಹುತೇಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಯಾಕೆಂದರೆ ಆ ಮಟ್ಟಿಗೆ ಹೆಡ್ ಕೋಚ್ ಗಂಭೀರ್, ಗಿಲ್ ಅವರನ್ನು ಬೆಂಬಲಿಸುತ್ತಾ ಬಂದಿದ್ದರು. ಹೀಗಾಗಿ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು. ಇದೀಗ ಶನಿವಾರ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಮುಂಬರುವ ನ್ಯೂಜಿಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿ ಹಾಗೂ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಘೋಷಿಸಿತು. ಆಗ ಕೊನೆಯ ಕ್ಷಣದಲ್ಲಿ ಗಿಲ್ ಹೊರಗಿಟ್ಟು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದು ನಿಜಕ್ಕೂ ದಿಟ್ಟ ತೀರ್ಮಾನ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬ್ಯಾಕ್‌ಅಪ್ ಓಪನ್ನರ್ ಆಗಿ ಇಶಾನ್ ಕಿಶನ್‌ಗೆ ಮಣೆ ಹಾಕಲಾಗಿದೆ. ಈ ಬಗೆಗೆ ಗಂಭೀರ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಹೆಡ್ ಕೋಚ್ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.
ಗೌತಮ್ ಗಂಭೀರ್ ವಿಡಿಯೋ ವೈರಲ್:
ಇನ್ನು ಏರ್‌ಪೋರ್ಟ್‌ನಿಂದ ಹೊರಬಂದ ಗೌತಮ್ ಗಂಭೀರ್ ಅವರನ್ನು ಮಾಧ್ಯಮದವರು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸೆಲೆಕ್ಷನ್ ಬಗ್ಗೆ ಹಾಗೂ ಶುಭ್‌ಮನ್ ಗಿಲ್ ತಂಡದಿಂದ ಹೊರಬಿದ್ದ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಗಂಭೀರ್ ಯಾವುದೇ ಪ್ರತಿಕ್ರಿಯೆ ನೀಡದೇ ಕಾರು ಹತ್ತಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶುಭ್‌ಮನ್ ಗಿಲ್‌ರಿಂದ ನೀರಸ ಪ್ರದರ್ಶನ:
ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಗಿಲ್‌ಗೆ ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಆಸ್ಟ್ರೇಲಿಯಾ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಗಿಲ್ ಕೇವಲ 132 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ದಕ್ಷಿಣ ಆಫ್ರಿಕಾ ಎದುರಿನ ಮೊದಲ ಮೂರು ಟಿ20 ಪಂದ್ಯಗಳಿಂದ ಕೇವಲ 32 ರನ್ ಬಾರಿಸಿದ್ದರು. ಗಿಲ್ ಕಳೆದ 18 ಟಿ20 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಒಂದು ಫಿಫ್ಟಿ ಬಾರಿಸಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಗಿಲ್ ಅವರನ್ನು ಆಯ್ಕೆ ಸಮಿತಿ ಭಾರತ ಟಿ20 ತಂಡದಿಂದ ಕೈಬಿಟ್ಟಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಇಶಾನ್ ಕಿಶನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್(ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್.


