ಮಹಿಳಾ ಏಕದಿನ ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತು ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಕುಸಿತದ ನಡುವೆ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಈ ಪಂದ್ಯ ನಿರ್ಣಾಯಕವಾಗಿದೆ.
ವಿಶಾಖಪಟ್ಟಣಂ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಎರಡೂ ತಂಡಗಳು ಸುಧಾರಿತ ಆಟದೊಂದಿಗೆ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಕಾಯುತ್ತಿವೆ.
ಭಾರತದ ಮುಂದಿದೆ ಬೆಟ್ಟದಷ್ಟು ಸವಾಲು
ಭಾರತ ಎಲ್ಲಾ ಮೂರೂ ವಿಭಾಗಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಕುಸಿತವನ್ನು ತಡೆಯಲು ಎದುರು ನೋಡುತ್ತಿದೆ. ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ಅಂದಾಜು 26,000 ಆಸನ ಸಾರ್ಮಥ್ಯ ಹೊಂದಿರುವ ಆಂಧ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಭರ್ತಿಯಾಗಲಿದೆ. ಭಾರತ ಬ್ಯಾಟಿಂಗ್ ವಿಭಾಗಕ್ಕೆ ಬಲತುಂಬುವ ಉದ್ದೇಶದಿಂದ ಕೇವಲ ಐವರು ಬೌಲರ್ ಗಳೊಂದಿಗೆ ಆಡುತ್ತಿದ್ದು, ಆಸ್ಟ್ರೇಲಿಯಾವನ್ನು ಕಟ್ಟಿಹಾಕಲು ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಲ್ಲದೇ, ತಂಡದ ತಾರಾ ಬ್ಯಾಟರ್‌ಗಳಾದ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗ್ಸ್‌ರಿಂದ ಈ ತನಕ ದೊಡ್ಡ ಸ್ಕೋರ್ ಮೂಡಿಬಂದಿಲ್ಲ. ಹೀಗಾಗಿ, ಈ ಮೂರೂ ಆಟಗಾರ್ತಿಯರ ಮೇಲೆ ಭಾರೀ ಒತ್ತಡವಿದೆ.
ಆಸೀಸ್ ಕೂಡಾ ಒತ್ತಡದಲ್ಲಿ
ಮತ್ತೊಂದೆಡೆ ಆಸ್ಟ್ರೇಲಿಯಾ ಕಳೆದೆರಡು ಪಂದ್ಯಗಳಲ್ಲಿ 128ಕ್ಕೆ 5 ಹಾಗೂ 76ಕ್ಕೆ 7ರಿಂದ ಚೇತರಿಸಿಕೊಂಡು ಗೆಲುವು ಸಾಧಿಸಿದೆ. ಆದರೂ, ತಂಡದ ಅಗ್ರ ಕ್ರಮಾಂಕ ಸುಧಾರಿತ ಆಟ ಪ್ರದರ್ಶಿಸಬೇಕಾದ ಒತ್ತಡದಲ್ಲಿದೆ. ಭಾರತ ಈ ಪಂದ್ಯ ಗೆದ್ದರೆ ಟೂರ್ನಿಯಲ್ಲಿ ಮುಂದಿನ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಲಿದೆ. ಭಾರತ ಇನ್ನೂ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ವಿರುದ್ಧ ಆಡಬೇಕಿದ್ದು, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಸಹ ಅನುಕೂಲವಾಗಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಐಸಿಸಿ ಮಹಿಳಾ ಏಕದಿನ ವಿಶ್ವಕಪ್: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್
ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಸತತ 3ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಶನಿವಾರ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 89 ರನ್ ಜಯ ಸಾಧಿಸಿತು. ಇಂಗ್ಲೆಂಡ್ ತನ್ನ ನಾಯಕಿ ನಥಾಲಿ ಸೀವರ್ ಬ್ರಂಟ್ ಅವರ ಶತಕ (117)ರ ನೆರವಿನಿಂದ 9 ವಿಕೆಟ್‌ಗೆ 253 ರನ್ ಗಳಿಸಿತು. ಲಂಕಾ 45.4 ಓವರಲ್ಲಿ 164ಕ್ಕೆ ಆಲೌಟ್ ಆಯಿತು. ಎಕ್ಲೆಸ್ಟೋನ್ 4 ವಿಕೆಟ್ ಕಿತ್ತರು. ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಲಂಕಾಕ್ಕೆ ಈ ಪಂದ್ಯದಲ್ಲೂ ನಿರಾಸೆ ಉಂಟಾಯಿತು.


