ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2017ರ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಸ್ಫೋಟಕ ಶತಕದಂತೆ ಈ ಬಾರಿಯೂ ಭಾರತೀಯ ಆಟಗಾರ್ತಿಯಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.
ನವಿ ಮುಂಬೈ: ಈ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್‌ನಲ್ಲಿ ಗುರುವಾರ ಭಾರತಕ್ಕೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಭಾರತ 3ನೇ ಬಾರಿ ಫೈನಲ್‌ಗೇರಲು ಕಾಯುತ್ತಿದ್ದರೆ, 7 ಬಾರಿ ಚಾಂಪಿಯನ್ ಆಸೀಸ್ ತಂಡ ತನ್ನ ಪ್ರಾಬಲ್ಯ ಮುಂದುವರಿಸಿ ದಾಖಲೆಯ 10ನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸುವ ವಿಶ್ವಾಸದಲ್ಲಿದೆ.
ಭಾರತದ ನಾಯಕಿ ಹರ್ಮನ್‌ಪ್ರೀತ್ 2017ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸೀಸ್ ವಿರುದ್ಧ 115 ಎಸೆತಕ್ಕೆ ಔಟಾಗದೆ 171 ರನ್ ಸಿಡಿಸಿ, ತಂಡವನ್ನು ಫೈನಲ್ ಗೇರಿಸಿದ್ದರು. ಅದೇ ರೀತಿ ಮತ್ತೊಂದು ಇನ್ನಿಂಗ್ಸ್ ಈ ಬಾರಿ ಭಾರತದ ಯಾವ ಆಟಗಾರ್ತಿಯಿಂದ ಬರಲಿದೆ ಎಂಬ ಕಾತರ ಅಭಿಮಾನಿಗಳಲ್ಲಿದೆ.
ಈ ಬಾರಿ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಹೇಳಿಕೊಳ್ಳುವಂತದ್ದೇನೂ ಇಲ್ಲ. ಆಡಿದ 7 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆದ್ದಿದೆ. ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧನಾ, ಪ್ರತೀಕಾ ರಾವಲ್ ಹೊರತುಪಡಿಸಿ ಇತರರು ಸ್ಥಿರ ಪ್ರದರ್ಶನ ನೀಡಿಲ್ಲ. ಮತ್ತೊಂದೆಡೆ ಆಸೀಸ್ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದೆ. ಲೀಗ್ ಹಂತ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದರೆ, ಮತ್ತೊಂದು ಪಂದ್ಯ ಮಳೆಗೆ ಬಲಿಯಾಗಿತ್ತು.
ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ
ಮುಂಬೈನಲ್ಲಿ ಗುರುವಾರ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಓವರ್‌ಗಳನ್ನು ಕಡಿತಗೊಳಿಸಿಯಾದರೂ ಗುರುವಾರವೇ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಗುರುವಾರ ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಶುಕ್ರವಾರಕ್ಕೆ ಮುಂದೂಡಿಕೆಯಾಗಲಿದೆ. ಎರಡೂ ದಿನವೂ ಪಂದ್ಯ ಪೂರ್ಣ ಗೊಳ್ಳದಿದ್ದರೆ ಅಂಕಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿದ್ದ ಆಸೀಸ್ ಫೈನಲ್ ಪ್ರವೇಶಿಸಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ವನಿತಾ ವಿಶಕಪ್ : ಚೊಚ್ಚಲ ಬಾರಿಗೆ ದ.ಆಫ್ರಿಕಾ ಫೈನಲ್‌ಗೆ ಲಗ್ಗೆ
ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ. ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ 125 ರನ್ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಇಂಗ್ಲೆಂಡ್‌ನ 9ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 1 ವಿಕೆಟ್‌ಗೆ 319 ರನ್ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್ 143 ಎಸೆತಗಳಲ್ಲಿ 169 ರನ್ ಸಿಡಿಸಿದರೆ, ತಾಜಿನ್ ಬ್ರಿಟ್ಸ್ 45, ಮಾರಿಜಾನ್ ಕಾಪ್ 42 ರನ್ ಗಳಿಸಿದರು. ಸೋಫಿ ಎಕ್ಲಸ್ಟೋನ್ 4 ವಿಕೆಟ್ ಕಿತ್ತರು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ರನ್ ಖಾತೆ ತೆರೆಯುವ ಮೊದಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆ ಬಳಿಕ ತಂಡ ಪುಟಿದೆದ್ದರೂ 42.3 ಓವರ್‌ಗಳಲ್ಲಿ 194 ರನ್‌ಗೆ ಆಲೌಟಾಯಿತು. ಕಾಪ್ 5 ವಿಕೆಟ್ ಪಡೆದರು.


