ಏಷ್ಯಾಕಪ್ ಫೈನಲ್‌ಗೂ ಮುನ್ನ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ತಮ್ಮ ಸಂಪೂರ್ಣ ಶಕ್ತಿಯನ್ನು ಅಂತಿಮ ಪಂದ್ಯಕ್ಕೆ ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಟೀಂ ಇಂಡಿಯಾ, ಈ ಟೂರ್ನಿಯಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿ ಸಂಪೂರ್ಣ ಆತ್ಮವಿಶ್ವಾಸದಲ್ಲಿದೆ.
ದುಬೈ: ಭಾರತದ ವಿರುದ್ಧದ ಏಷ್ಯಾಕಪ್ ಫೈನಲ್‌ಗಾಗಿ ತಂಡದ ಸಂಪೂರ್ಣ ಶಕ್ತಿಯನ್ನು ಮೀಸಲಿಟ್ಟಿದ್ದೇವೆ ಎಂದು ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ವಾರ್ನಿಂಗ್ ನೀಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಭಾರತದೆದುರು ಸೋತಿದ್ದರೂ, ಹೆಚ್ಚಿನ ಒತ್ತಡದ ಪಂದ್ಯದಲ್ಲಿ ಪರಿಸ್ಥಿತಿಗಳನ್ನು ಬದಲಾಯಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಫೈನಲ್‌ಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ ಎಂಟು ಗಂಟೆಗೆ ಪಂದ್ಯ ನಡೆಯಲಿದೆ.
ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕ್ ನಾಯಕ
ಪಂದ್ಯಕ್ಕೂ ಮುನ್ನ ಅಘಾ ಹೇಳಿದ್ದಿಷ್ಟು, ''ಪಾಕಿಸ್ತಾನ ಮತ್ತು ಭಾರತ ಪರಸ್ಪರ ಆಡುವಾಗ ಯಾವಾಗಲೂ ಹೆಚ್ಚಿನ ಒತ್ತಡವಿರುತ್ತದೆ. ಒತ್ತಡವಿಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಎರಡೂ ತಂಡಗಳಿಗೂ ಸಮಾನ ಪ್ರಮಾಣದ ಒತ್ತಡವಿರುತ್ತದೆ. ನಾವು ಅವರಿಗಿಂತ ಹೆಚ್ಚು ತಪ್ಪುಗಳನ್ನು ಮಾಡಿದ್ದೇವೆ. ಅದಕ್ಕಾಗಿಯೇ ನಾವು ಪಂದ್ಯಗಳನ್ನು ಗೆದ್ದಿಲ್ಲ. ಅವರಿಗಿಂತ ಕಡಿಮೆ ತಪ್ಪುಗಳನ್ನು ಮಾಡಿದರೆ ನಾವು ಗೆಲ್ಲುತ್ತೇವೆ. ಯಾವ ತಂಡ ಕಡಿಮೆ ತಪ್ಪುಗಳನ್ನು ಮಾಡುತ್ತದೆಯೋ, ಆ ತಂಡ ಗೆಲ್ಲುತ್ತದೆ,'' ಎಂದು ಅಘಾ ಸ್ಪಷ್ಟಪಡಿಸಿದರು.
'ನಾವು ಗೆಲ್ಲುವುದನ್ನು ನೀವು ನೋಡುತ್ತೀರಿ. ಅತ್ಯುತ್ತಮ ಕ್ರಿಕೆಟ್ ಆಡುವುದು ನಮ್ಮ ಪ್ರಯತ್ನ. 40 ಓವರ್‌ಗಳಲ್ಲಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ, ನಾವು ಯಾವುದೇ ತಂಡವನ್ನು ಸೋಲಿಸಬಹುದು' ಎಂದು ಅಘಾ ಹೇಳಿದ್ದಾರೆ.
ಸಂಪೂರ್ಣ ಆತ್ಮವಿಶ್ವಾಸದಲ್ಲಿದೆ ಭಾರತ
ಇನ್ನೊಂದೆಡೆ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಕಣಕ್ಕಿಳಿಯುವಾಗ ಸಂಪೂರ್ಣ ಆತ್ಮವಿಶ್ವಾಸದಲ್ಲಿದೆ. ಆಡಿದ ಆರು ಪಂದ್ಯಗಳಲ್ಲೂ ಗೆದ್ದಿದೆ. ಸೂಪರ್ ಫೋರ್‌ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಸೂಪರ್ ಓವರ್‌ನಲ್ಲಿ ಭಾರತ ಮಣಿಸಿತ್ತು. ಇದು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಎದುರಾದ ಕಠಿಣವಾದ ಪಂದ್ಯವಾಗಿತ್ತು. ಗ್ರೂಪ್ ಹಂತ ಮತ್ತು ಸೂಪರ್ ಫೋರ್‌ನಲ್ಲಿ ಪಾಕಿಸ್ತಾನವನ್ನು ಭಾರತ ಅನಾಯಾಸವಾಗಿ ಸೋಲಿಸಿತ್ತು. ಮತ್ತೊಂದೆಡೆ, ಪಾಕಿಸ್ತಾನದ ಮೇಲೆ ಸಂಪೂರ್ಣ ಒತ್ತಡವಿದೆ. ಭಾರತದೆದುರು ಅನುಭವಿಸಿದ ಎರಡು ಸೋಲುಗಳಿಗೆ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸಲಿದೆ.
ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಸಲ ಮುಖಾಮುಖಿಯಾಗಿದ್ದವು. ಆಗ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಅಂತರದ ಜಯ ಸಾಧಿಸಿತ್ತು. ಇದಾದ ಬಳಿಕ ಸೂಪರ್-4 ಹಂತದಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಟೀಂ ಇಂಡಿಯಾ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಏಷ್ಯಾಕಪ್ ಇತಿಹಾಸದಲ್ಲೇ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಭಾರತ ಒಂಬತ್ತನೇ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದೆ, ಪಾಕಿಸ್ತಾನ ಮೂರನೇ ಪ್ರಶಸ್ತಿಗಾಗಿ ಕಣಕ್ಕಿಳಿಯುತ್ತಿದೆ. ಟಿ20ಯಲ್ಲಿ ಮುಖಾಮುಖಿ ದಾಖಲೆಯಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿದ ಹದಿನೈದು ಟಿ20 ಪಂದ್ಯಗಳ ಪೈಕಿ ಭಾರತ 12 ಪಂದ್ಯಗಳಲ್ಲಿ ಜಯಿಸಿದ್ದರೇ, ಪಾಕಿಸ್ತಾನ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಇನ್ನು ಮುಂದೆ ಭಾರತಕ್ಕೆ ಪ್ರತಿಸ್ಪರ್ಧಿಯೇ ಅಲ್ಲ ಎಂದಿದ್ದಾರೆ. ಇದು ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ. ಹೀಗಾಗಿ ಫೈನಲ್ ಪಂದ್ಯದ ಮೇಲೆ ಸಾಕಷ್ಟು ಕುತೂಹಲವಿದೆ.
ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸಂಭಾವ್ಯ XI: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.


