ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ನಿರ್ಣಾಯಕ ಮೂರನೇ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಬೌಲಿಂಗ್ ವಿಭಾಗದ ಬಗ್ಗೆ ಚಿಂತೆಯಲ್ಲಿರುವ ಟೀಂ ಇಂಡಿಯಾ, ಹ್ಯಾಟ್ರಿಕ್ ಶತಕದ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಲವನ್ನು ನೆಚ್ಚಿಕೊಂಡಿದೆ. 

ವಿಶಾಖಪಟ್ಟಣ: ಭಾರತ - ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಮೂರನೇ ಏಕದಿನ ಪಂದ್ಯ ಇಂದು. ವಿಶಾಖಪಟ್ಟಣದಲ್ಲಿ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ. ಇಂದು ಗೆದ್ದವರು ಏಕದಿನ ಸರಣಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ವಿಶಾಖಪಟ್ಟಣದಲ್ಲಿ ಇಬ್ಬರೂ ಸರಣಿ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದು, ಟೀಂ ಇಂಡಿಯಾ ಮೇಲೆ ಒತ್ತಡವಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋತಿದ್ದ ಭಾರತಕ್ಕೆ ಏಕದಿನ ಸರಣಿಯ ಸೋಲನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. 358 ರನ್ ಗಳಿಸಿದರೂ ಅದನ್ನು ಉಳಿಸಿಕೊಳ್ಳಲಾಗದ ಬೌಲಿಂಗ್ ವಿಭಾಗವೇ ಚಿಂತೆಗೆ ಕಾರಣವಾಗಿದೆ.

ವಿಶ್ರಾಂತಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಭಾರತಕ್ಕೆ ಗೆಲುವು ಸಾಧ್ಯ. ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ. ಹ್ಯಾಟ್ರಿಕ್ ಶತಕದ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. 2018ರಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿರುವ ಕೊಹ್ಲಿ, ವಿಶಾಖಪಟ್ಟಣದಲ್ಲಿ ಆಡಿದ ಏಳು ಏಕದಿನ ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 587 ರನ್ ಗಳಿಸಿದ್ದಾರೆ. ವಿಶಾಖಪಟ್ಟಣದ ಸ್ಟೇಡಿಯಂ ವಿರಾಟ್ ಕೊಹ್ಲಿಯ ನೆಚ್ಚಿನ ಮೈದಾನಗಳಲ್ಲಿ ಒಂದು ಎನಿಸಿಕೊಂಡಿದೆ.

ರೋಹಿತ್ ಶರ್ಮಾ ನೀಡುವ ಆರಂಭವೂ ನಿರ್ಣಾಯಕವಾಗಲಿದೆ. ಋತುರಾಜ್ ಗಾಯಕ್ವಾಡ್ ಮತ್ತು ನಾಯಕ ಕೆ ಎಲ್ ರಾಹುಲ್ ಫಾರ್ಮ್‌ನಲ್ಲಿದ್ದು, ಸ್ಕೋರ್‌ಬೋರ್ಡ್ ಬಗ್ಗೆ ಚಿಂತೆಯಿಲ್ಲ. ಯಶಸ್ವಿ ಜೈಸ್ವಾಲ್ ಕೂಡ ರನ್ ಗಳಿಸಿದರೆ ಭಾರತ ದೊಡ್ಡ ಮೊತ್ತ ಕಲೆಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ. ರನ್ ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿದೆ ತೆಂಬಾ ಬವುಮಾ ಬಳಗ. ಬಾಲಂಗೋಚಿಗಳವರೆಗೂ ಬ್ಯಾಟಿಂಗ್ ಬಲವಿದೆ. ಬೌಲರ್‌ಗಳು ಕೂಡ ಭಾರತಕ್ಕೆ ಸವಾಲು ಒಡ್ಡಬಲ್ಲರು.

ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್:

ಭಾರತ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಎರಡೂ ಪಂದ್ಯಗಳಲ್ಲೂ ಸುಂದರ್ ಅವರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಬದಲಿಗೆ ತಿಲಕ್ ವರ್ಮಾ ಇಲ್ಲವೇ ರಿಷಭ್ ಪಂತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಎರಡು ಬದಲಾವಣೆ?

ಗಾಯಗೊಂಡಿರುವ ಬರ್ಗರ್ ಮತ್ತು ಜೋರ್ಜಿಗೆ ಬದಲಾಗಿ ಬಾರ್ಟ್‌ಮನ್ ಮತ್ತು ರಿಕೆಲ್ಟನ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ವಿಶಾಖಪಟ್ಟಣದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಭಾರತವೇ ಗೆದ್ದಿದೆ. ಇಬ್ಬನಿ ಬೀಳುವುದರಿಂದ ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಕಳೆದ ಇಪ್ಪತ್ತು ಏಕದಿನ ಪಂದ್ಯಗಳಲ್ಲಿ ಭಾರತದ ನಾಯಕನಿಗೆ ಟಾಸ್ ಗೆಲ್ಲಲು ಸಾಧ್ಯವಾಗಿಲ್ಲ.

ಭಾರತ ಸಂಭಾವ್ಯ XI: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ/ರಿಷಭ್ ಪಂತ್, ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ, ಪ್ರಸಿದ್ದ್ ಕೃಷ್ಣ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್.