ಲಖನೌ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳಿಂದ ಸೋತು ಐಪಿಎಲ್ ಪ್ಲೇ-ಆಫ್‌ನಿಂದ ಹೊರಬಿದ್ದಿದೆ. ಲಖನೌ 205 ರನ್ ಗಳಿಸಿದರೂ, ಹೈದರಾಬಾದ್ 18.2 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ (59) ಮತ್ತು ಹೆನ್ರಿಕ್ ಕ್ಲಾಸೆನ್ (47) ಮಿಂಚಿದರು. ಲಖನೌ ಪರ ಮಾರ್ಷ್ (65), ಮಾರ್ಕ್ರಮ್ (61), ಪೂರನ್ (45) ರನ್ ಗಳಿಸಿದರು.
ಲಖನೌ: 18ನೇ ಆವೃತ್ತಿ ಐಪಿಎಲ್ ಪ್ಲೇ-ಆಫ್ ರೇಸ್‌ನಿಂದ ಲಖನೌ ಸೂಪರ್ ಜೈಂಟ್ಸ್ ಅಧಿಕೃತವಾಗಿ ಹೊರಬಿದ್ದಿದೆ. ನಿರ್ಣಾಯಕ ಪಂದ್ಯದಲ್ಲಿ ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ನಿಂದ ಸೋತ ರಿಷಭ್ ಪಂತ್ ನಾಯಕತ್ವದ ಲಖನೌ ತಂಡದ ನಾಕೌಟ್ ಕನಸು ನುಚ್ಚುನೂರಾಯಿತು.
ಲಖನೌ ಆಡಿದ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 10 ಅಂಕ ಸಂಪಾದಿಸಿದೆ. ತಂಡ ಇನ್ನುಳಿದ 2 ಪಂದ್ಯಗಳಲ್ಲಿ ಗೆದ್ದರೂ ತಂಡದ ಅಂಕ ಗರಿಷ್ಠ 14 ಅಂಕ ಆಗುತ್ತದೆ. ಆದರೆ ಮುಂಬೈ, ಡೆಲ್ಲಿ ಪೈಕಿ ಒಂದು ತಂಡದ ಅಂಕ 14ಕ್ಕಿಂತ ಹೆಚ್ಚಾಗಲಿರುವ ಕಾರಣ, ಲಖನೌ ರೇಸ್‌ನಿಂದ ಹೊರಗುಳಿಯಿತು. ಮತ್ತೊಂದೆಡೆ ಸನ್‌ರೈಸರ್ಸ್ ಆಡಿರುವ 12 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 9 ಅಂಕದೊಂದಿಗೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಲಖನೌ 7 ವಿಕೆಟ್‌ಗೆ 205 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಸನ್‌ರೈಸರ್ಸ್, 18.2 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.
ಆರಂಭದಲ್ಲೇ ಸ್ಫೋಟಕ ಆಟವಾಡಿದ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 59 ರನ್ ಸಿಡಿಸಿ ನಿರ್ಗಮಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 6 ಸಿಕ್ಸರ್‌ಗಳಿದ್ದವು. ತಂಡ ಪವರ್-ಪ್ಲೇನಲ್ಲಿ 72 ರನ್ ಕಲೆಹಾಕಿತು. ಇದರಿಂದಾಗಿ ಇತರ ಬ್ಯಾಟರ್ಸ್ ಹೆಚ್ಚಿನ ಒತ್ತಡವಿಲ್ಲದೆ ಆಡಿದರು. ಹೈನ್ರಿಚ್ ಕ್ಲಾಸೆನ್ 28 ಎಸೆತಗಳಲ್ಲಿ 47, ಇಶಾನ್ ಕಿಶನ್ 28 ಎಸೆತಕ್ಕೆ 35 ಹಾಗೂ ಕಮಿಂಡು ಮೆಂಡಿಸ್ 21 ಎಸೆತಕ್ಕೆ 32 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಸ್ಫೋಟಕ ಆಟ: ಇದಕ್ಕೂ ಮುನ್ನ ಲಖನೌ ಕೂಡಾ ಸ್ಫೋಟಕ ಆಟವಾಡಿತು. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಮಿಚೆಲ್ ಮಾರ್ಷ್, ಏಡನ್ ಮಾರ್ಕ್‌ರಮ್ ಹಾಗೂ ನಿಕೋಲಸ್ ಪೂರನ್ ಅಬ್ಬರದ ಆಟವಾಡಿದರು. ಮೊದಲ ವಿಕೆಟ್‌ಗೆ ಮಾರ್ಕ್‌ರಮ್ ಹಾಗೂ ಮಾರ್ಷ್ 10.3 ಓವರಲ್ಲಿ 115 ರನ್ ಜೊತೆಯಾಟವಾಡಿದರು. ಮಾರ್ಷ್ 39 ಎಸೆತಕ್ಕೆ 65 ರನ್, ಮಾರ್ಕ್‌ರಮ್ 38 ಎಸೆತಕ್ಕೆ 61 ರನ್ ಸಿಡಿಸಿದರು. ಬಳಿಕ ಪೂರನ್ 26 ಎಸೆತಕ್ಕೆ 45 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಸ್ಕೋರ್: ಲಖನೌ 20 ಓವರಲ್ಲಿ 7 ವಿಕೆಟ್‌ಗೆ 205 (ಮಾರ್ಷ್ 65, ಮಾರ್ಕ್ರಮ್ 61, ಪೂರನ್ 45, ಮಾಲಿಂಗ 2-28), ಸನ್‌ರೈಸರ್ಸ್ 18.2 ಓವರಲ್ಲಿ 206/4 (ಅಭಿಷೇಕ್ 59, ಕ್ಲಾಸೆನ್ 47, ರಾಥಿ 2-37)
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮಾ
ಪ್ಲೇ-ಆಫ್‌ನಿಂದ 5 ತಂಡಗಳು ಔಟ್: ಈ ಬಾರಿ ಐಪಿಎಲ್‌ನಿಂದ 5 ತಂಡಗಳು ಅಧಿಕೃತವಾಗಿ ಹೊರಬಿದ್ದಿವೆ. ಚೆನ್ನೈ, ರಾಜಸ್ಥಾನ, ಹೈದರಾಬಾದ್, ಕೋಲ್ಕತಾ ಬಳಿಕ ಲಖನೌ ಕೂಡಾ ನಾಕೌಟ್ ಕನಸು ಭಗ್ನಗೊಂಡಿತು.
1 ಸ್ಥಾನಕ್ಕಿನ್ನು ಡೆಲ್ಲಿ, ಮುಂಬೈ ಪೈಪೋಟಿ
ಈ ಬಾರಿ ಗುಜರಾತ್, ಆರ್‌ಸಿಬಿ, ಪಂಜಾಬ್ ಪ್ಲೇ-ಆಫ್ ಪ್ರವೇಶಿಸಿವೆ. ಇನ್ನುಳಿದ 1 ಸ್ಥಾನಕ್ಕೆ ಮುಂಬೈ, ಡೆಲ್ಲಿ ನಡುವೆ ಪೈಪೋಟಿಯಿದೆ. ಮುಂಬೈ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. 12 ಪಂದ್ಯಗಳನ್ನಾಡಿರುವ ಡೆಲ್ಲಿ ತಂಡ 13 ಅಂಕ ಹೊಂದಿದೆ. ಈ ಎರಡೂ ತಂಡಕ್ಕೆ ತಲಾ 2 ಪಂದ್ಯ ಬಾಕಿಯಿವೆ. ಇದರಲ್ಲಿ ಒಂದು ಪಂದ್ಯದಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಈ ಎರಡೂ ತಂಡಗಳಿಗೆ ಪಂಜಾಬ್ ಸವಾಲು ಎದುರಾಗಲಿವೆ.
ಅಭಿಷೇಕ್- ರಾಠಿ ನಡುವೆ ವಾಗ್ಯುದ್ಧ
ಮೈದಾನದಲ್ಲೇ ಸನ್‌ರೈಸರ್ಸ್‌ನ ಅಭಿಷೇಕ್-ಲಖನೌನ ಧ್ರುವ್ ರಾಠಿ ನಡುವೆ ಭಾರೀ ವಾಗ್ಯುದ್ಧ ನಡೆಯಿತು. ಅಭಿಷೇಕ್‌ರ ವಿಕೆಟ್ ಕಿತ್ತ ರಾಠಿ, ಭಾರೀ ಸಂಭ್ರಮಾಚರಣೆ ನಡೆಸಿದ್ದಲ್ಲದೇ ಕೈ ಸನ್ನೆ ಮೂಲಕ ಮೈದಾನದಿಂದ ಹೊರಹೋಗುವಂತೆ ಸೂಚಿಸಿದರು. ಇದು ಅಭಿಷೇಕ್ ಕೋಪಕ್ಕೆ ಕಾರಣವಾಯಿತು. ಬಳಿಕ ಇಬ್ಬರ ಜಗಳಕ್ಕಿಳಿದರು. ಅಂಪೈರ್‌ಗಳು, ಸಹ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದರು. ಆದರೆ ಪಂದ್ಯದ ಬಳಿಕ ಇಬ್ಬರೂ ಪರಸ್ಪರ ಕೈಕುಲುಕಿ, ನಗುತ್ತಲೇ ಮಾತನಾಡಿದರು.

