ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದ ರದ್ದಾಯಿತು. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಕೆಕೆಆರ್ ಪ್ಲೇ-ಆಫ್ ನಿಂದ ಹೊರಬಿದ್ದಿದೆ. ಆರ್‌ಸಿಬಿ ಪ್ಲೇ-ಆಫ್‌ಗೆ ಬಹುತೇಕ ಅರ್ಹತೆ ಪಡೆದಿದ್ದು, ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅಂತಿಮ ಖಚಿತತೆ ಅವಲಂಬಿತವಾಗಿದೆ. ಮುಂದಿನ ಪಂದ್ಯ ಮೇ ೨೩ ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ.
ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ವಾರದ ಬಳಿಕ ಪುನರಾರಂಭಗೊಂಡಿದೆಯಾದರೂ, ಮೊದಲ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದರಿಂದ ಪಂದ್ಯ ರದ್ದಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನ ನಿರಂತರವಾಗಿ ಮಳೆ ಸುರಿದಿದ್ದರಿಂದ ಪಂದ್ಯ ಟಾಸ್ ಕೂಡಾ ಆಗದೇ ರದ್ದಾಯಿತು. ಇದರಿಂದಾಗಿ ಪ್ಲೇ ಆಫ್ ಲೆಕ್ಕಾಚಾರವೇ ತಲೆಕೆಳಗಾಗಿ ಹೋಯಿತು.
ಹೌದು, ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಪುನಾರಂಭಗೊಳ್ಳಲು ಮಳೆರಾಯ ಅಡ್ಡಿಪಡಿಸಿದ. ಶನಿವಾರ ರಾಜ್ಯ ರಾಜಧಾನಿಯಲ್ಲಿ ಭಾರೀ ಮಳೆ ಮುನ್ಸೂಚನೆ ಇತ್ತು. ನಿರೀಕ್ಷೆಯಂತೆಯೇ ಸಂಜೆ 6.15ರ ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿಯಾದರೂ ನಿಲ್ಲಲಿಲ್ಲ. ಸತತವಾಗಿ ಮಳೆ ಸುರಿದ ಕಾರಣ, ಪಂದ್ಯವನ್ನು ರದ್ದುಗೊಳಿಸದೆ ಬೇರೆ ಆಯ್ಕೆಯೇ ಇರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇರುವ ಕಾರಣ ಮಳೆ ನಿಂತ 20-30 ನಿಮಿಷಗಳಲ್ಲಿ ಆಟ ಆರಂಭಿಸಬಹುದು. ಆದರೆ ಮಳೆ ನಿಲ್ಲಲೇ ಇಲ್ಲ.
ತಲೆಕೆಳಗಾದ ಪ್ಲೇ ಆಫ್ ಲೆಕ್ಕಚಾರ:
6.15ರಿಂದ 7.30ರ ವರೆಗೂ ಧಾರಾಕಾರವಾಗಿ ಸುರಿದ ಮಳೆ ಆ ಬಳಿಕ ನಿಧಾನಗೊಂಡಿತು. ಸುಮಾರು 8 ಗಂಟೆ ಸಮಯದಲ್ಲಿ ಮೈದಾನಕ್ಕೆ ಹೊದಿಸಿದ್ದ ಹೊದಿಕೆಗಳನ್ನು ತೆಗೆಯಲು ಮೈದಾನ ಸಿಬ್ಬಂದಿ ಸಿದ್ಧತೆ ನಡೆಸಿದರು. 4ನೇ ಅಂಪೈರ್ ಮೈದಾನಕ್ಕಿಳಿದು ಪರಿಶೀಲನೆ ನಡೆಸಿ ಬಳಿಕ ಪಿಚ್ ಕ್ಯುರೇಟರ್ ಜೊತೆ ಚರ್ಚೆ ನಡೆಸಿದರು. ಆದರೆ ಮತ್ತೆ ಮಳೆ ಜೋರಾದ ಕಾರಣ, ಪಂದ್ಯ ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು.
ಇನ್ನು ಈ ಪಂದ್ಯ ರದ್ದಾಗುತ್ತಿದ್ದಂತೆಯೇ ಪ್ಲೇ ಆಫ್ ಕನಸು ಕಾಣುತ್ತಿದ್ದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಯಿತು. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಬಳಿಕ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ನಾಲ್ಕನೇ ತಂಡ ಎನ್ನುವ ಕುಖ್ಯಾತಿಗೆ ಅಜಿಂಕ್ಯ ರಹಾನೆ ಪಡೆ ಪಾತ್ರವಾಯಿತು.
ಇನ್ನು ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಪ್ಲೇ-ಆಫ್ ಹೊಸ್ತಿಲು ತಲುಪಿದ್ದು, ಅಗ್ರ-4ರಲ್ಲಿ ಸ್ಥಾನ ಬಹುತೇಕ ಖಚಿತಗೊಂಡಿದೆ. ಸದ್ಯ ಆರ್‌ಸಿಬಿ ಬಳಿ 17 ಅಂಕಗಳಿದ್ದು ತಂಡ ಬಾಕಿ ಇರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ, ಅಗ್ರ-2ರಲ್ಲಿ ಸ್ಥಾನ ಗಳಿಸಿ, ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಸದ್ಯ ಆರ್‌ಸಿಬಿ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ನೋಡುವುದಾದರೇ,
1. ಇಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಜಯಿಸಿದರೆ, ಆರ್‌ಸಿಬಿ ಅಧಿಕೃತವಾಗಿ ಪ್ಲೇ ಆಫ್‌ಗೇರಲಿದೆ.
2. ಇಂದು ನಡೆಯಲಿರುವ ಗುಜರಾತ್-ಡೆಲ್ಲಿ ನಡುವಿನ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದರೆ, ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪ್ಲೇ ಆಫ್‌ಗೆ ಎಂಟ್ರಿಕೊಡಲಿವೆ.
3. ಒಂದು ವೇಳೆ ಇಂದು ಪಂಜಾಬ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಗೆಲುವು ಸಾಧಿಸಿದರೆ, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ಪ್ಲೇ ಆಫ್‌ಗೇರಲಿವೆ.
4. ಇಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಜಯಿಸಿದರೆ ಯಾವುದೇ ತಂಡ ಅಧಿಕೃತವಾಗಿ ಪ್ಲೇ ಆಫ್‌ಗೇರುವುದಿಲ್ಲ. ಪ್ಲೇ ಆಫ್ ಸ್ಥಾನಕ್ಕಾಗಿ ಇನ್ನೂ ಕೆಲವು ಪಂದ್ಯಗಳನ್ನು ಕಾಯಬೇಕಾಗುತ್ತದೆ.
ಮೇ 23ಕ್ಕೆ ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿಗೆ ಪಂದ್ಯ
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ತಂಡ ಮುಂದಿನ ಒಂದು ವಾರ ಬೆಂಗಳೂರಲ್ಲೇ ಉಳಿಯಲಿದೆ. ಆ ಬಳಿಕ ಆರ್‌ಸಿಬಿ ಲಖನೌಗೆ ಪ್ರಯಾಣಿಸಿ ಮೇ 27ರಂದು ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.


