ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, 16 ಪಂದ್ಯಗಳು ಬಾಕಿ ಇರುವಾಗಲೇ ಬಿಸಿಸಿಐ ಈ ವರ್ಷದ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಿದೆ. ಸರ್ಕಾರ ಮತ್ತು ಗೃಹ ಇಲಾಖೆಯ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ನಡೆಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ (ಮೇ.9): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಭಾರತಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ವರ್ಷದ ಐಪಿಎಲ್‌ನಲ್ಲಿ ಇನ್ನು 16 ಪಂದ್ಯಗಳು ಬಾಕಿ ಇರುವಂತೆಯೇ ಇಡೀ ಟೂರ್ನಿಯನ್ನು ರದ್ದು ಮಾಡಿದೆ. ಪಾಕಿಸ್ತಾನ ವಿರುದ್ಧ ಯುದ್ದ ಭೀತಿ ಹೆಚ್ಚಾಗಿರುವ ನಡುವೆ, ಸಂಘರ್ಷ ಕಡಿಮೆಯಾಗಿರುವ ಲಕ್ಷಣಗಳು ಕಾಣದೇ ಇರುವ ಕಾರಣಕ್ಕೆ ಸರ್ಕಾರವನ್ನು ಸಂಪರ್ಕಿಸಿದ ಬಳಿಕ ಬಿಸಿಸಿಐ ಈ ನಿರ್ಧಾರ ಮಾಡಿದೆ. ಗೃಹ ಇಲಾಖೆಯ ಸೂಚನೆಯ ಮೇರೆಗೆ ಈ ನಿರ್ಧಾರ ಮಾಡಲಾಗಿದೆ. ಇಂದು ನಡೆದ ಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಕ್ರಿಕೆಟ್‌ ನಡೆಸುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೊರೋನಾ ಸಂಕಷ್ಟದಲ್ಲಿಯೂ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿದ ಬಿಸಿಸಿಐ, ಇದೀಗ ಗೃಹ ಇಲಾಖೆ ಸೂಚನೆ ಮೇರೆಗೆ ಉಳಿದ 16 ಪಂದ್ಯಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಯುದ್ಧ ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಉಳಿದ ಪಂದ್ಯಗಳು ಮುಂದುವರಿಯುವ ಸಾಧ್ಯತೆ ಇದೆ. ಪಂದ್ಯ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಜಮಾಯಿಸುವ ಸಾಧ್ಯತೆ ಇದ್ದು, ವೈರಿ ರಾಷ್ಟ್ರ ಪಾಕಿಸ್ತಾನ ಇದನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದ ಮೇಲೆಯೇ ಗುಂಡಿನ ದಾಳಿ ಮಾಡುವ ಸಾಧ್ಯತೆ ಇರುವುದರಿಂದ, ಗೃಹ ಇಲಾಖೆ ಸೂಚನೆ ಮೇರೆಗೆ ಬಿಸಿಸಿಐ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. 

Scroll to load tweet…

ಗುರುವಾರ ಕ್ಯಾನ್ಸಲ್ ಆಗಿತ್ತು ಮ್ಯಾಚ್:
ಯುದ್ಧ ಭೀತಿ ಹಿನ್ನೆಲೆಯಲ್ಲಿ ಗುರುವಾರವೇ ಧರ್ಮಶಾಲಾ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಏರ್ ಡ್ರೋನ್ ಸ್ಟ್ರೈಕ್ ಹಿನ್ನೆಯಲ್ಲಿ ಸ್ಟೇಡಿಯಂನಲ್ಲಿ ಲೈಟ್ ಆಫ್ ಮೂಡಲು ಸೂಚಿಸಿದ್ದರಿಂದ ಈ ಕ್ರಮಕ್ಕೆ ಬಿಸಿಸಿಐ ಮುಂದಾಗಿತ್ತು. ನಂತರ ಪಾಕಿಸ್ತಾನ ಭಾರತದ ಪಠಾಣ್‌ಕೋಟ್, ಉದಮ್‌ಪುರ್ ಹಾಗೂ ಇತರೆ ಪ್ರದೇಶಗಳಲ್ಲಿ ನಡೆಸಿದ ದಾಳಿಗೆ, ಭಾರತ ಪ್ರತ್ಯುತ್ತರ ತೋರಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿತ್ತೆಂಬುವುದು ಆ ನಂತರ ವರದಿಯಾಗಿತ್ತು. 

ಯುದ್ಧ ಭೀತಿ ಹಿನ್ನೆಲೆ ಏನು? 
ಏಪ್ರಿಲ್ 22, 2025ರಂದು ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಹಿಂದೂಗಳನ್ನು ಬಲಿ ಪಡೆದ ಪ್ರತೀಕಾರವಾಗಿ ಭಾರತ ಶತ್ರು ದೇಶಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ತಕ್ಕ ಉತ್ತರ ನೀಡಿದೆ. ನಾಗರಿಕರಿಗೆ ಯಾವುದೇ ಅಪಾಯವಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತ ದಾಳಿ ನಡೆಸಿದ್ದು, 9 ಉಗ್ರ ತಾಣಗಳನ್ನು ನಾಶ ಪಡಿಸಿದೆ. ಅಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ಮಹಿಳೆಯ ಸಿಂಧೂರ ಕಿತ್ತು ಕೊಂಡಿದ್ದಕ್ಕೆ ಪ್ರತೀಕಾರವಾಗಿ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ಪ್ರತೀಕಾರ ತೀರಿಸಿಕೊಂಡಿದ್ದು, ಅದನ್ನು ಇಡೀ ಜಗತ್ತಿಗೆ ಅವರಿಂದಲೇ ಪತ್ರಿಕಾ ಗೋಷ್ಠಿ ಮಾಡಿಸಿ ಹೇಳಿದ್ದು ದೇಶದ ನಾರಿ ಶಕ್ತಿ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಅಷ್ಟೇ ಅಲ್ಲ ಹಿಂದೂ ಎನ್ನುವ ಕಾರಣಕ್ಕೆ 26 ಅಮಾಯಕ ನಾಗರಿಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಹಿಂದು-ಮುಸ್ಲಿಂ ಜಂಟಿಯಾಗಿಯೇ ನಡೆದ ಕಾರ್ಯಾಚರಣೆ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ವಿವರಣೆ ನೀಡಿ, ದೇಶದ ಭದ್ರತಾ ವಿಷಯವಾಗಿ ಬಂದಾಗ ಭಾರತದಲ್ಲಿ ಮಹಿಳೆಯರೊಡಗೂಡಿ ಹಿಂದೂ-ಮುಸ್ಲಿಂ ಎಂದೆಂದಿಗೂ ಒಟ್ಟಾಗಿಯೇ ಇರುತ್ತಾರೆಂದು ಜಗತ್ತಿಗೆ ಸಾರಿ ಹೇಳಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 

ಭಾರತ ಅಳವಡಿಸಿಕೊಂಡಿರುವ ರಷ್ಯಾದ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್ಸ್‌ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್‌ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿದೆ. 'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್‌ ಡಿಫೆನ್ಸ್‌ ಸಿಸ್ಟಮ್‌ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸಬಲ್ಲದು. ಭಾರತ ಇಂಥ ನಾಲ್ಕು ಎಸ್‌-400 ಡಿಫೆನ್ಸ್‌ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ನ ರಕ್ಷಣೆಗಾಗಿ ನಿಯೋಜಿಸಿದೆ.

ಭಾರತ-ಫಾಕಿಸ್ತಾನ ಸಂಘರ್ಷದ ಪ್ರತಿ ಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್‌ಗೆ ಟ್ಯೂನ್ ಆಗಿರಿ.