19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ಆಟಗಾರರನ್ನು ಖರೀದಿಸಿದೆ. ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಮತ್ತು ಜೇಕಬ್ ಡಫಿ ಅವರಂತಹ ಪ್ರಮುಖ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಬಲಪಡಿಸಿಕೊಂಡಿದೆ.
ಅಬುಧಾಬಿ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ 8 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಈ ಬಾರಿಯ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿಸಬಹುದು ಎನ್ನುವ ಕುತೂಹಲವಿತ್ತು. ಅದಕ್ಕೆಲ್ಲ ಇದೀಗ ಉತ್ತರ ಸಿಕ್ಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಿನಿ ಹರಾಜಿಗೂ ಮುನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿತ್ತು. ಹೀಗಾಗಿ ಹರಾಜಿಗೆ ಕೇವಲ 16.40 ಕೋಟಿ ರುಪಾಯಿಗಳನ್ನು ಮಾತ್ರ ಉಳಿಸಿಕೊಂಡಿತ್ತು. ಇದೀಗ ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು? ಅವರ ರೋಲ್ ಏನು ಎನ್ನುವುದನ್ನು ನೋಡೋಣ ಬನ್ನಿ.
1. ವೆಂಕಟೇಶ್ ಅಯ್ಯರ್:
ಮಧ್ಯಪ್ರದೇಶ ಮೂಲದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 7 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ಆಸರೆಯಾಗಬಲ್ಲ ಆಟಗಾರನೀತ. ಕಳೆದ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು 23.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಕೇವಲ 7 ಕೋಟಿಗೆ ವೆಂಕಿ ಅಯ್ಯರ್ ಖರೀದಿಸುವ ಮೂಲಕ ಆರ್‌ಸಿಬಿ ಫ್ರಾಂಚೈಸಿಯು ತನ್ನ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನು ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಬ್ಯಾಟರ್ ಆಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ.
2. ಮಂಗೇಶ್ ಯಾದವ್:
ಮಧ್ಯಪ್ರದೇಶ ಮೂಲದ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ ಅವರನ್ನು ಬರೋಬ್ಬರಿ 5.20 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಯಶ್ ದಯಾಳ್‌ಗೆ ಬ್ಯಾಕ್‌ಅಪ್ ಆಗಿ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದೆ.
ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಗ್ವಾಲಿಯರ್ ಚೀಥಾಸ್ ಪರವಾಗಿ 21 ಓವರ್ ಬೌಲಿಂಗ್ ಮಾಡಿ 14 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು. 6 ಪಂದ್ಯಗಳ ಪೈಕಿ ಮೂರು ಬಾರಿ ಮಂಗೇಶ್ ಯಾದವ್ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಒಂದು ಪಂದ್ಯದಲ್ಲಿ ಕೇವಲ 18 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.
3. ಜೇಕಬ್ ಡಫಿ:
ನ್ಯೂಜಿಲೆಂಡ್ ಮೂಲದ ನೀಳಕಾಯದ ವೇಗಿ ಜೇಕಬ್ ಡಫಿಯನ್ನು ಮೂಲ ಬೆಲೆ 2 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಸದ್ಯ ಡಫಿ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಢಫಿಯನ್ನು ಜೋಶ್ ಹೇಜಲ್‌ವುಡ್ ಅವರಿಗೆ ಬ್ಯಾಕ್‌ಅಪ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
4. ಜೋರ್ಡನ್ ಕಾಕ್ಸ್:
ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಕೇವಲ 75 ಲಕ್ಷ ರುಪಾಯಿ ಮೂಲ ಬೆಲೆಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಇನ್ನುಳಿದಂತೆ ಬೆಂಚ್ ಸ್ಟ್ರೆಂಥ್‌ಗಾಗಿ ಪುದುಚೆರಿ ಮೂಲದ 18 ವರ್ಷದ ಸಾತ್ವಿಕ್ ದೇಶ್ವಾಲ್, ಅಂಡರ್-19 ಪ್ರತಿಭೆ ಕಾನಿಷ್ಕ್ ಚೌಹ್ಹಾಣ್, ವಿಕ್ಕಿ ಓಸ್ವಾಲ್ ಹಾಗೂ ವಿಹಾನ್ ಮಲ್ಹೋತ್ರಾ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ತಲಾ 30 ಲಕ್ಷ ರುಪಾಯಿ ಮೂಲ ಬೆಲೆಗೆ ಖರೀದಿಸಿದೆ.


