ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಸಾಕು. ಭಾರತಕ್ಕೆ 4 ವಿಕೆಟ್ ಅವಶ್ಯಕತೆ ಇದೆ. ಆದರೆ ಇಂಗ್ಲೆಂಡ್ ತಂಡ ಇಂದು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ.

ಓವಲ್ (ಆ.03) ಓವಲ್ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. 374 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಹಾಗೂ ಜೋ ರೂಟ್ ಶತಕದ ನೆರವಿನಿಂದ ದಿಟ್ಟ ಹೋರಾಟ ನೀಡಿತ್ತು. ಇತ್ತ ಟೀಂ ಇಂಡಿಯಾ ಕೂಡ ಬೌಲಿಂಗ್ ದಾಳಿ ಮೂಲಕ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದೆ. ಮಳೆ ಹಾಗೂ ಬ್ಯಾಡ್ ಲೈಟ್ ಕಾರಣದಿಂದ 4ನೇ ದಿನದಾಟ ಬೇಗನೆ ಅಂತ್ಯಗೊಂಡಿದೆ. ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 339 ರನ್ ಸಿಡಿಸಿದೆ. ಇಂಗ್ಲೆಂಡ್ ಗೆಲುವಿಗೆ 35 ರನ್ ಸಾಕು. ಭಾರತದ ಗೆಲುವಿಗೆ 4 ವಿಕೆಟ್ ಸಾಕು. ಆದರೆ ಇಂದು ಇಂಗ್ಲೆಂಡ್ ತಂಡ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕೆಲ ಕಾರಣವಿದೆ.

ಇಂಗ್ಲೆಂಡ್ ನಿದ್ದೆ ಭಂಗ

ಇಂಗ್ಲೆಂಡ್ ತಂಡ ಗೆಲುವಿಗೆ ಕೇವಲ 35 ರನ್ ಸಾಕು. ಇಷ್ಟೇ ಅಲ್ಲ ಸಂಪೂರ್ಣ 5ನೇ ದಿನದಾಟವಿದೆ. ಭಾರತಕ್ಕೆ ನಾಲ್ಕು ವಿಕೆಟ್ ಅವಶ್ಯಕತೆ ಇದೆ. ನಾಲ್ಕನೇ ದಿನದಾಟ ಸಂಪೂರ್ಣವಾಗಿ ನಡೆದರೂ ಇಂದೇ ಇಂಗ್ಲೆಂಡ್ ಗೆಲುವಿನ ಕೇಕೆ ಅಥವಾ ಅಂತಿಮ ಹಂತದಲ್ಲಿ ಕೆಲ ಹೈಡ್ರಾಮ ಸೃಷ್ಟಿಯಾಗುತ್ತಿತ್ತು. ಆದರೆ ಆಟ 5ನೇ ದಿನಕ್ಕೆ ಕಾಲಿಟ್ಟಿರುವುದು ಇದೀಗ ಇಂಗ್ಲೆಂಡ್ ನಿದ್ದೆಗೆಡಿಸಿದೆ. ಭಾರತೀಯ ಬೌಲರ್‌ಗಳು ಇಂದು ವಿಶ್ರಾಂತಿಗೆ ಜಾರಿ ನಾಳೆ ಮತ್ತಷ್ಟು ಎನರ್ಜಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಅಂತಿಮ ಸೆಶನ್‌ನಲ್ಲಿ ವಿಕೆಟ್ ಬೀಳಲು ಪ್ರಾರಂಭಿಸಿದೆ. ಇಷ್ಟೇ ಅಲ್ಲ ಪ್ರತಿ ದಿನದಾಟದ ಮೊದಲ ಸೆಶನ್ ಅತ್ಯಂತ ಮುಖ್ಯ. ಇಲ್ಲಿ ವಿಕೆಟ್ ಉಳಿಸಿಕೊಳ್ಳುವುದೇ ಸವಾಲು. ಇಷ್ಟೇ ಅಲ್ಲ ಕೊನೆಯ ದಿನ ಕೂಡ. ಹೀಗಾಗಿ ಇಂಗ್ಲೆಂಡ್ ಇಂದು ಆರಾಮಾಗಿ ನಿದ್ರಿಸಲು ಸಾಧ್ಯವಿಲ್ಲ. ಭಾರತೀಯ ಬೌಲರ್ ಕೊನೆಯ ದಿನದಲ್ಲಿ ಅಗ್ರೆಸ್ಸೀವ್ ದಾಳಿ ಮಾಡಲಿದ್ದಾರೆ.

ಪಿಚ್‌ಗೆ ಅತಿಯಾಗಿ ರೋಲರ್ ಬಳಸುತ್ತಾ ಇಂಗ್ಲೆಂಡ್

ಅಂತಿಮ ದಿನದಲ್ಲಿ ಪಿಚ್‌ಗೆ ಅತಿಯಾಗಿ ರೋಲರ್ ಬಳಸುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಪಿಚ್ ಬೌಲರ್‌ಗಳಿಗೆ ಸಹಕರಿಸಿದಂತೆ ಮಾಡುವ ಸಾಧ್ಯತೆ ಇದೆ.

ಆರಂಭದಲ್ಲಿ ಮೂರು ವಿಕೆಟ್ ಬಳಿಕ ಇಂಗ್ಲೆಂಡ್ ಅಬ್ಬರ

374 ರನ್ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ ಆರಂಭದಲ್ಲೇ ಇಂಗ್ಲೆಂಡ್ ಮೇಲೆ ಸವಾರಿ ಮಾಡಿತ್ತು. ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಮ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. 106 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಆಸರೆಯಾದರು. ಇವರ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಹ್ಯೂರಿ ಬ್ರೂಕ್ ಶತಕ ಸಿಡಿಸಿ ಮಿಂಚಿದರು. 111 ರನ್ ಕಾಣಿಕೆ ನೀಡಿದ ಹ್ಯಾರಿ ಬ್ರೂಕ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಇತ್ತ ಜೋ ರೂಟ್ ಹೋರಾಟ ಮುಂದುವರಿದಿತ್ತು. ರೂಟ್ 105 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಜೋಕೋಬ್ ಬೇಥೆಲ್ ಔಟಾದರು. ಸದ್ಯ ಜ್ಯಾಮಿಸ್ಮಿತ್ ಹಾಗೂ ಜ್ಯಾಮಿ ಓವರ್ಟನ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲುವು

ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆಲುವು ದಾಖಲಿಸಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರಕ್ಕೆ ಇಂಗ್ಲೆಂಡ್ ಬೆಚ್ಚಿ ಬಿದ್ದಿತ್ತು. ಭಾರತ 336 ರನ್ ಅಂತರದ ಗೆಲುವು ದಾಖಲಿಸಿತ್ತು. ಭಾರತದ ಇಂಗ್ಲೆಂಡ್ ಕಂಡೀಷನ್‌ಗೆ ಹೊಂದಿಕೊಂಡಿದೆ, ಪಿಚ್ ಅರಿತುಕೊಂಡಿದೆ, ಅಬ್ಬರಿಸುತ್ತಿದೆ, ಭಾರತದ ಮುಂದೆ ಇಂಗ್ಲೆಂಡ್ ಹೇಳ ಹೆಸರಿಲ್ಲದಂತಾಯಿತು ಎಂದು ಪ್ರಶಂಸೆಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾ ಮುಗ್ಗರಿಸಿತು.

ಲಾರ್ಡ್ಸ್ ಪಂದ್ಯ ಕೈಚೆಲ್ಲಿದ್ದ ಭಾರತ

ಲಾರ್ಡ್ಸ್ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಎಲ್ಲಾ ಅವಕಾಶಗಳಿತ್ತು. ಆದರೆ ಚೇಸಿಂಗ್ ವೇಳೆ ರವೀಂದ್ರ ಜಡೇಜಾ ಹೋರಾಟ ನೀಡಿದರೂ ಇನ್ನುಳಿದವರಿಂದ ಹೋರಾಟ ಬರಲಿಲ್ಲ. ಜಡೇಜಾ ಅಜೇಯರಾಗಿ ಉಳಿದರೆ ಟೀಂ ಇಂಡಿಯಾ ಆಲೌಟ್ ಆಗುವ ಮೂಲಕ ಮುಗ್ಗರಿಸಿತ್ತು. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಮಾಡಿದ ತಪ್ಪುಗಳಿಂದ ಪಂದ್ಯ ಕೈಚೆಲ್ಲಿತು. ಇಂಗ್ಲೆಂಡ್ ಕೇವಲ 22 ರನ್‌ಗಳಿಂದ ಈ ಪಂದ್ಯ ಗೆದ್ದುಕೊಂಡಿತು.

4ನೇ ಟೆಸ್ಟ್ ಪಂದ್ಯ ಡ್ರಾ

ಭಾರತ 2ನೇ ಟೆಸ್ಟ್ ಪಂದ್ಯ ಗೆಲುವು ಸಾಧಿಸಿದರೆ, ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ಭಾರತ ಹೋರಾಡಿ ಡ್ರಾ ಮಾಡಿಕೊಂಡಿಲ್ಲ. ಡ್ರಾ ಒಂದೇ ದಾರಿಯಾಗಿತ್ತು.