ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನ 18ನೇ ಆವೃತ್ತಿಯಲ್ಲಿ 8ನೇ ಸೋಲು ಅನುಭವಿಸಿದೆ. ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್‌ಗಳ ಅಂತರದಿಂದ ಸೋತು, ಚೆನ್ನೈ ಪ್ಲೇಆಫ್‌ನಿಂದ ಹೊರಬಿದ್ದಿದೆ. ಚಹಲ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 8ನೇ ಸೋಲು ಅನುಭವಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೋರಾಟ್ ಲೀಗ್ ಹಂತದಲ್ಲಿಯೇ ಮುಕ್ತಾಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಪಂಜಾಬ್ ಕಿಂಗ್ಸ್ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಪಾಲಿನ ಮಾಡು ಇಲ್ಲವೇ ಮಡಿ ಎನಿಸಿಕೊಂಡಿದ್ದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿಯೂ ಪಂದ್ಯ ಕಾಪಾಡಿಕೊಳ್ಳಲು ಧೋನಿ ಪಡೆ ವಿಫಲವಾಗಿದೆ. ಗೆಲ್ಲಲು 191 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಪಂಜಾಬ್ ಪರ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಕೇವಲ 36 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ ಆಕರ್ಷಕ 54 ರನ್ ಸಿಡಿಸಿದರೆ, ನಾಯಕ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೇಯಸ್ ಅಯ್ಯರ್ ಚೆನ್ನೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 41 ಎಸೆತಗಳನ್ನು ಎದುರಿಸಿದ ಅಯ್ಯರ್ 5 ಬೌಂಡರಿ ಹಾಗೂ 4 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಮೂಲ್ಯ 72 ರನ್ ಸಿಡಿಸಿದರು. ಇನ್ನು ಶಶಾಂಕ್ ಸಿಂಗ್ ಕೇವಲ 12 ಎಸೆತಗಳಲ್ಲಿ ಚುರುಕಿನ 23 ರನ್ ಸಿಡಿಸಿ ಪಂಜಾಬ್ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 22 ರನ್ ಗಳಿಸುವಷ್ಟರಲ್ಲಿ ಸಿಎಸ್‌ಕೆ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಆದರೆ ಸ್ಯಾಮ್ ಕರ್ರನ್ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇಂಗ್ಲೆಂಡ್ ಮೂಲದ ಆಲ್ರೌಂಡರ್ ಕರ್ರನ್ ಕೇವಲ 47 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 88 ರನ್ ಗಳಿಸಿ ಮಾರ್ಕೊ ಯಾನ್ಸೆನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಡೆವಾಲ್ಡ್ ಬ್ರೆವಿಸ್ 32ರನ್ ಸಿಡಿಸುವ ಮೂಲಕ ಅಮೂಲ್ಯ ರನ್ ಕಾಣಿಕೆ ನೀಡಿದರು.
ಚಹಲ್‌ಗೆ ಹ್ಯಾಟ್ರಿಕ್ ವಿಕೆಟ್: ಪಂಜಾಬ್ ಕಿಂಗ್ಸ್ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಹಲ್ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 4 ವಿಕೆಟ್ ಕಬಳಿಸುವ ಮೂಲಕ ಚೆನ್ನೈ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಮೊದಲಿಗೆ ಚಹಲ್‌ಗೆ ಧೋನಿ ಮೊದಲ ಎಸೆತದಲ್ಲೇ ಬಿಗ್ ಸಿಕ್ಸರ್ ಸಿಡಿಸಿದರು. ಆದರೆ ಮರು ಎಸೆತದಲ್ಲೇ ಚಹಲ್, ಧೋನಿಯ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕೊನೆಯ 3 ಎಸೆತಗಳಲ್ಲಿ ದೀಪಕ್ ಹೂಡ, ಅನ್ಸೂಲ್ ಕಂಬೋಜ್ ಹಾಗೂ ನೂರ್ ಅಹಮದ್ ಅವರನ್ನು ಬಲಿ ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡರು.
ಇನ್ನು ಈ ಗೆಲುವಿನೊಂದಿಗೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇನ್ನು 10 ಪಂದ್ಯಗಳನ್ನಾಡಿ ಕೇವಲ 4 ಅಂಕ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಮೊದಲ ತಂಡವಾಗಿ ಹೊರಬಿದ್ದಿದೆ.


