ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟೀಂ ಇಂಡಿಯಾ 25 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ನಾಯಕ ಶುಭ್‌ಮನ್ ಗಿಲ್ ಪೆವಿಲಿಯನ್ ಸೇರಿದ್ದು, ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಅರಂಭಿಕ ಆಘಾತ ಅನುಭವಿಸಿದೆ. ಕೇವಲ 25 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹೀಗಿರುವಾಗಲೇ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಮ್ಯಾಚ್ ತಾತ್ಕಾಲಿಕ ಸ್ಥಗಿತಗೊಂಡಿದೆ.
ಭಾರತಕ್ಕೆ ಆರಂಭಿಕ ಆಘಾತ
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. 223 ದಿನಗಳ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ರೋಹಿತ್ ಶರ್ಮಾ ಒಂದು ಬೌಂಡರಿ ಬಾರಿಸಿದರಾದರೂ, ಜೋಶ್ ಹೇಜಲ್‌ವುಡ್ ಇನ್‌ಸ್ವಿಂಗ್ ಚೆಂಡನ್ನು ಸರಿಯಾಗಿ ಗ್ರಹಿಸದೇ, ಸೆಕೆಂಡ್ ಸ್ಲಿಪ್‌ನಲ್ಲಿದ್ದ ರೆನ್‌ಶೋಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ರೋಹಿತ್ 14 ಎಸೆತಗಳನ್ನು ಎದುರಿಸಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಇದರ ಬೆನ್ನಲ್ಲೇ ಕಣಕ್ಕಿಳಿದ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಪಿಚ್‌ನಲ್ಲಿ ಖಾತೆ ತೆರೆಯಲು ಪರದಾಡಿದರು. 8 ಎಸೆತಗಳನ್ನು ಎದುರಿಸಿದ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ವಾಪಾಸ್ಸಾದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ 30 ಏಕದಿನ ಇನ್ನಿಂಗ್ಸ್ ಬಳಿಕ ಮೊದಲ ಬಾರಿಗೆ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇನ್ನು ನಾಯಕ ಶುಭ್‌ಮನ್ ಗಿಲ್ 10 ರನ್ ಗಳಿಸಿ ವಿಕೆಟ್ ಕೀಪರ್ ಜೋಶ್ ಫಿಲಿಫ್ಪಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ ನಾಯಕನಿಗೆ ಆಸೀಸ್ ವೇಗಿ ನೇಥನ್ ಎಲ್ಲಿಸಿ ಪೆವಿಲಿಯನ್ ಹಾದಿ ತೋರಿಸಿದರು.
ಪಂದ್ಯ ತಾತ್ಕಾಲಿಕ ಸ್ಥಗಿತ:
ಇನ್ನು ಭಾರತ 8.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ತಾತ್ಕಾಲಿಕವಾಗಿ ಮ್ಯಾಚ್ ಸ್ಥಗಿತಗೊಂಡಿದೆ. ಸದ್ಯ ಉಪನಾಯಕ ಶ್ರೇಯಸ್ ಅಯ್ಯರ್ 2 ಹಾಗೂ ಅಕ್ಷರ್ ಪಟೇಲ್ 0 ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಪರ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ನೇಥನ್ ಎಲ್ಲಿಸ್ ಹಾಗೂ ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಒಂದು ಓವರ್ ಕಡಿತ:
ಮಳೆಯಿಂದ ಪಂದ್ಯ ಕೆಲಕಾಲ ಸ್ಥಗಿತಗೊಂಡಿದ್ದರಿಂದ ಪಂದ್ಯವನ್ನು 50 ಓವರ್ ಬದಲಿಗೆ 49 ಓವರ್‌ಗೆ ಸೀಮಿತಗೊಳಿಸಲಾಗಿದೆ. 4 ಬೌಲರ್ 10 ಓವರ್ ಹಾಗೂ ಒಬ್ಬ ಬೌಲರ್ 9 ಓವರ್ ಮಾತ್ರ ಬೌಲಿಂಗ್ ಮಾಡಬಹುದು.


