2025ರ ಐಪಿಎಲ್ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೊಳಪಟ್ಟ ಪಂದ್ಯವಾಗಿದೆ. ಜಿಯೋ ಸ್ಟಾರ್ ವೇದಿಕೆಯಲ್ಲಿ ಈ ಪಂದ್ಯವು 31.7 ಬಿಲಿಯನ್ ನಿಮಿಷಗಳ ವೀಕ್ಷಣಾ ಸಮಯವನ್ನು ದಾಖಲಿಸಿದೆ.

ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿ ಅರ್ಧ ತಿಂಗಳೇ ಕಳೆದಿದೆ. ಹೀಗಿದ್ದೂ ಮಿಲಿಯನ್ ಡಾಲರ್ ಟಿ20 ಲೀಗ್‌ನ ಕುರಿತಾದ ಚರ್ಚೆಗಳು ಇನ್ನೂ ನಿಂತಿಲ್ಲ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚೊಚ್ಚಲ ಟ್ರೋಫಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು 6 ರನ್ ರೋಚಕ ಜಯ ಸಾಧಿಸಿತ್ತು. ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ. ಈ ಐಪಿಎಲ್ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗೊಳಪಟ್ಟ ಪಂದ್ಯ ಎನ್ನುವ ಇತಿಹಾಸ ನಿರ್ಮಿಸಿದೆ. ಟಿವಿ ಹಾಗೂ ಡಿಜಿಟಲ್ ಫ್ಲಾಟ್‌ಫಾರಂ ಮೂಲಕ ಬರೋಬ್ಬರಿ 840 ನಿಮಿಷಕ್ಕೂ ಅಧಿಕ ಕಾಲ ವೀಕ್ಷಣೆಗೊಳಗಾದ ಪಂದ್ಯ ಎನಿಸಿಕೊಂಡಿದೆ.

2025ರ ಐಪಿಎಲ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಜಿಯೋ ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಕುರಿತಂತೆ ಮಹತ್ವದ ಅಪ್‌ಡೇಟ್ ನೀಡಿದೆ. ಈ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗೊಳಗಾದ ಪಂದ್ಯ ಎನಿಸಿಕೊಂಡಿದೆ. ಎಲ್ಲಾ ಪ್ಲಾಟ್‌ಫಾರಂ ಸೇರಿದಂತೆ ಈ ಪಂದ್ಯದ ವಾಚಿಂಗ್ ಟೈಮ್ 31.7 ಬಿಲಿಯನ್ ಮಿನಿಟ್ಸ್‌ಗಳಾಗಿವೆ. ಇನ್ನು ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯವು ಹಿಂದೆಂದೂ ಕಂಡು ಕೇಳರಿಯದ ದಾಖಲೆ ನಿರ್ಮಿಸಿದೆ. ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಫೈನಲ್ ಪಂದ್ಯವನ್ನು 892 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

Scroll to load tweet…

ಜಿಯೋಹಾಟ್‌ಸ್ಟಾರ್‌ಗೆ ಬಂಪರ್ ಲಾಭ:

ಐಪಿಎಲ್ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿತ್ತು. ಕಳೆದ ವರ್ಷದ ಐಪಿಎಲ್ ಸೀಸನ್‌ಗೆ ಹೋಲಿಸಿದರೆ, ವೀವರ್‌ಶಿಪ್‌ನಲ್ಲಿ ಈ ಬಾರಿ 29% ಲಾಭ ಗಳಿಸಿದೆ. ಇನ್ನು ಟಿವಿಯ ಐಪಿಎಲ್ ಸ್ಟ್ರೀಮಿಂಗ್ ಡಿಜಿಟಲ್ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತ್ತು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ 456 ಬಿಲಿಯನ್ ಮಿನಿಟ್ ಲೈವ್ ಕವರೇಜ್‌ ಅನ್ನು ವೀಕ್ಷಿಸಿದ್ದಾರೆ. ಇದು ಕೂಡಾ ಯಾವುದೇ ಟೂರ್ನಮೆಂಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎನಿಸಿಕೊಂಡಿದೆ.

ಇದೊಂದು ಅವಿಸ್ಮರಣೀಯ ವೀವರ್‌ಶಿಪ್‌ ನಂಬರ್ಸ್, ನಮಗೆ ಈ ಐಪಿಎಲ್ ಜನರಿಗೆ ಎಷ್ಟು ಪ್ರೀತಿಪಾತ್ರವಾಗಿದೆ ಎನ್ನುವುದನ್ನು ತೋರಿಸುತ್ತದೆ. ಈ ಸೀಸನ್‌ ವೀಕ್ಷಕರಿಗೆ ಹೊಸ ಅನುಭವ ನೀಡಲು ಪ್ರಯತ್ನಿಸಿದೆವು ಎಂದು ಜಿಯೋ ಸ್ಟಾರ್‌ನ ಸ್ಪೋರ್ಟ್ಸ್ ಅಂಡ್ ಲೈವ್ ಎಕ್ಸ್‌ಫೀರಿಯನ್ಸ್ ಸಿಇಒ ಸಂಜೋಗ್ ಗುಪ್ತಾ ಹೇಳಿದ್ದಾರೆ.

ಇನ್ನು ಐಪಿಎಲ್ ಫೈನಲ್ ಪಂದ್ಯವನ್ನು ನೆನಪಿಸಿಕೊಳ್ಳುವುದಾದರೇ, ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 190 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 43 ರನ್ ಗಳಿಸಿದ್ದ ಆರ್‌ಸಿಬಿ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನು ನಾಯಕ ರಜತ್ ಪಾಟೀದಾರ್ 26, ಲಿಯಾಮ್ ಲಿವಿಂಗ್‌ಸ್ಟೋನ್ 25 ರನ್‌ಗಳ ಅಮೂಲ್ಯ ರನ್ ಕಾಣಿಕೆ ನೀಡಿದರು.

ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ ತಂಡವು 6 ರನ್ ಅಂತರದ ರೋಚಕ ಗೆಲುವು ಸಾಧಿಸಿತು. ಕೊನೆಯಲ್ಲಿ ಶಶಾಂಕ್ ಸಿಂಗ್ ಕೇವಲ 30 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದರಾದರೂ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ವಿಫಲರಾದರು.