ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಅವರ 87 ರನ್ ಮತ್ತು ದೀಪ್ತಿ ಶರ್ಮಾ ಅವರ 5 ವಿಕೆಟ್ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಭಾವುಕರಾದರು.
ಮುಂಬೈ: ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆದ್ದಾಗ ಮಾಜಿ ನಾಯಕ ರೋಹಿತ್ ಶರ್ಮಾ ಭಾವುಕರಾದರು. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಧ್ಯರಾತ್ರಿ ಇತಿಹಾಸ ಸೃಷ್ಟಿಯಾದಾಗ ರೋಹಿತ್ ಕೂಡ ಸಾಕ್ಷಿಯಾಗಿದ್ದರು. ಪಂದ್ಯದ ಆರಂಭದಲ್ಲಿ ಐಸಿಸಿ ಚಾನೆಲ್ ಜೊತೆ ಮಾತನಾಡಿದ ರೋಹಿತ್, ಮಹಿಳಾ ತಂಡದ ಫೈನಲ್ ಪ್ರವೇಶವನ್ನು ಪುರುಷರ ತಂಡದ ವಿಶ್ವಕಪ್ ಪಯಣಕ್ಕೆ ಹೋಲಿಸಿದರು. 'ಮಹಿಳಾ ತಂಡ ಹಲವು ಬಾರಿ ಗೆಲುವಿನ ಸನಿಹಕ್ಕೆ ಬಂದಿದೆ. ಆದರೆ ಗೆಲುವಿನ ಗಡಿ ದಾಟಲು ಸಾಧ್ಯವಾಗಿಲ್ಲ. ಕಳೆದ 15 ವರ್ಷಗಳಿಂದ ಎರಡೂ ತಂಡಗಳ ಕಥೆ ಇದೇ ಆಗಿದೆ. ಈ ಬಾರಿ ಅವರು ಅದನ್ನು ಮೀರಿ ನಿಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ರೋಹಿತ್ ಹೇಳಿದ್ದರು.
ರೋಹಿತ್ ಭವಿಷ್ಯ ನುಡಿದಂತೆಯೇ ಮಹಿಳಾ ತಂಡ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಕಪ್ ಎತ್ತಿ ಹಿಡಿಯಿತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 298/7 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ, 87 ರನ್ ಗಳಿಸಿ ಭಾರತದ ಇನ್ನಿಂಗ್ಸ್‌ನ ಬೆನ್ನೆಲುಬಾದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಸ್ಥಿರ ಪ್ರದರ್ಶನ ನೀಡಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ನಾಯಕಿ ಲಾರಾ ವೋಲ್ವರ್ಟ್ ಅವರ ದಿಟ್ಟ ಶತಕದ ಹೊರತಾಗಿಯೂ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಪರ ದೀಪ್ತಿ ಶರ್ಮಾ 5 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ ನಿರ್ಣಾಯಕ ಘಟ್ಟದಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೈದಾನದಲ್ಲೇ ಭಾವುಕರಾದ ರೋಹಿತ್ ಶರ್ಮಾ:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಲೋಕಲ್ ಹೀರೋ ರೋಹಿತ್ ಶರ್ಮಾ ಮೈದಾನಕ್ಕೆ ಬಂದು ಭಾರತೀಯ ಆಟಗಾರ್ತಿಯರನ್ನು ಹುರಿದುಂಬಿಸಿದರು. ಪಂದ್ಯ ಆರಂಭದಿಂದ ಕೊನೆಯ ಕ್ಷಣದವರೆಗೂ ಸ್ಟೇಡಿಯಂನಲ್ಲಿದ್ದು ಪಂದ್ಯವನ್ನು ಕಣ್ತುಂಬಿಕೊಂಡರು. ಇನ್ನು ಹರ್ಮನ್‌ಪ್ರೀತ್ ಕೌರ್ ಪಡೆ ಕೊನೆಯ ವಿಕೆಟ್ ಕಬಳಿಸುತ್ತಿದ್ದಂತೆಯೇ ರೋಹಿತ್ ಶರ್ಮಾ ಕೆಲಕಾಲ ಭಾವುಕರಾದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಂಪರ್ ಬಹುಮಾನ:
ಮೊದಲ ವಿಶ್ವಕಪ್ ಗೆಲುವಿನ ಜೊತೆಗೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ 39.78 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಬಹುಮಾನದ ಮೊತ್ತವಾಗಿದೆ. ಫೈನಲ್‌ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನ ಪಡೆದ ದಕ್ಷಿಣ ಆಫ್ರಿಕಾಗೆ 19.88 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಇನ್ನುಳಿದಂತೆ ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ತಲಾ 9.94 ಕೋಟಿ ರೂಪಾಯಿ ಸಿಗಲಿದೆ. ಅಷ್ಟೇ ಅಲ್ಲ, ಬಿಸಿಸಿಐ ಕಡೆಯಿಂದಲೂ ಭಾರತ ತಂಡಕ್ಕೆ ದೊಡ್ಡ ಬಹುಮಾನದ ಮೊತ್ತ ಸಿಕ್ಕಿದೆ. ಬಿಸಿಸಿಐ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ


