ರೋಹಿತ್ ಮತ್ತು ಕೊಹ್ಲಿ ಟೆಸ್ಟ್ ಮತ್ತು ಟಿ೨೦ ಕ್ರಿಕೆಟ್‌ಗೆ ವಿದಾಯ ಹೇಳಿ, ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸಿದ್ದಾರೆ. ೨೦೨೭ರ ವಿಶ್ವಕಪ್‌ನಲ್ಲಿ ಆಡುವ ಗುರಿಯಿದ್ದರೂ, ಸ್ಥಾನ ಖಚಿತವಿಲ್ಲ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಪ್ರದರ್ಶನ ಮುಂದುವರಿಸಿದರೆ ಮಾತ್ರ ಆಯ್ಕೆ ಸಾಧ್ಯ ಎಂದಿದ್ದಾರೆ.

ಬೆಂಗಳೂರು: ಕಳೆದೊಂದು ವಾರದಲ್ಲಿ ಟೀಂ ಇಂಡಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಮುಂದಿನ ತಿಂಗಳು ಇಂಗ್ಲೆಂಡ್ ಎದುರು ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ವಿದಾಯ ಘೋಷಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ವಿಫಲವಾಗಿತ್ತು. ಇನ್ನು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿಗೆ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹೊಸ ಮುಖಗಳಿಗೆ ಅವಕಾಶ ನೀಡಲು ಮನಸ್ಸು ಮಾಡಿದ್ದರಿಂದ ಹಿರಿಯ ಕ್ರಿಕೆಟಿಗರು ವಿದಾಯ ಘೋಷಿಸುವಂತಾಯಿತು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಹಾಗೂ ಟಿ20 ಹೀಗೆ ಎರಡೂ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸದ್ಯ ಈ ಇಬ್ಬರು ಆಟಗಾರರ ಗುರಿ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಹೆಚ್ಚು ಹೆಚ್ಚು ರನ್ ಗಳಿಸುವ ಮೂಲಕ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಪ್ ಗೆಲ್ಲಿಸುವ ಗುರಿ ಹೊಂದಿದ್ದಾರೆ. ಈ ಇಬ್ಬರು ಆಟಗಾರರು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದರೂ, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಿಲ್ಲ ಎನ್ನುವಂತಹ ಮಾತುಗಳು ಕೇಳಿ ಬಂದಿವೆ.

ಈ ಕುರಿತಂತೆ ಮಾತನಾಡಿರುವ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ಬಿಸಿಸಿಐ ಆಯ್ಕೆ ಸಮಿತಿಯು 2027ರ ವಿಶ್ವಕಪ್ ಟೂರ್ನಿಯನ್ನು ಗಮನಿಸುತ್ತಿದೆ. ಹೀಗಾಗಿ ಇವರಿಬ್ಬರೂ 2027ರ ವಿಶ್ವಕಪ್ ಟೂರ್ನಿಯ ಬಗ್ಗೆ ಆಡುತ್ತಾರಾ ಎನ್ನುವುದನ್ನು ನೋಡಬೇಕಿದೆ. ಈವರೆಗೆ ನೀಡಿದಂತಹ ಪ್ರದರ್ಶನವನ್ನು ಅವರು ಇನ್ನು ಮುಂದೆಯೂ ನೀಡುತ್ತಾರಾ? ಇನ್ನು ಬಿಸಿಸಿಐ ಆಯ್ಕೆ ಸಮಿತಿಯು ಆಲೋಚಿಸುತ್ತದೆ. ಒಂದು ವೇಳೆ ಆಯ್ಕೆ ಸಮಿತಿಗೆ ಇದು ಸಾಧ್ಯ ಎನಿಸಿದರೆ, ಈ ಇಬ್ಬರೂ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಸನ್ನಿ ಹೇಳಿದ್ದಾರೆ.

ಆದರೆ ವೈಯುಕ್ತಿವಾಗಿ ಹೇಳಬೇಕೆಂದರೆ, ಅವರಿಬ್ಬರೂ 2027ರ ಏಕದಿನ ವಿಶ್ವಕಪ್ ಆಡುತ್ತಾರೆ ಎಂದು ಅನಿಸುತ್ತಿಲ್ಲ. ಆದರೆ ಮುಂದಿನ ವರ್ಷ ಏನೇನು ಆಗುತ್ತದೆ ಎಂದು ಯಾರಿಗೆ ಗೊತ್ತು?. ಅವರು ಮುಂದಿನ ವರ್ಷ ಭರ್ಜರಿ ಫಾರ್ಮ್‌ಗೆ ಬಂದು ಶತಕಗಳ ಮೇಲೆ ಶತಕ ಬಾರಿಸಿದರೆ, ದೇವರೂ ಕೂಡಾ ಅವರನ್ನು ಡ್ರಾಪ್ ಮಾಡಲು ಸಾಧ್ಯವಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ಟೆಸ್ಟ್ ತಂಡದಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿವೃತ್ತಿ ಪಡೆದುಕೊಂಡಿದ್ದಾರೆ. ಇನ್ನೇನಿದ್ದರೂ ಈ ಇಬ್ಬರು ಭಾರತ ತಂಡವನ್ನು ಪ್ರತಿನಿಧಿಸುವುದು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ.