ಐಸಿಸಿ ಮಹಿಳಾ ವಿಶ್ವಕಪ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಪ್ರತೀಕಾ ರಾವಲ್ ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ. ಈ ಜೋಡಿಯು 212 ರನ್ಗಳ ದಾಖಲೆಯ ಜೊತೆಯಾಟವಾಡುವ ಮೂಲಕ ಭಾರತ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ.
ನವಿ ಮುಂಬೈ: ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿರುವ ಮ್ಯಾಚ್ನಲ್ಲಿ ಭಾರತೀಯ ಓಪನ್ನರ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.
ಕಿವೀಸ್ ಎದುರು ಉತ್ತಮ ಆರಂಭ ಪಡೆದ ಭಾರತ
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಭಾರತ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಆರಂಭದ ಮೊದಲ 10 ಓವರ್ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ ಕೇವಲ 40 ರನ್ ಕಲೆಹಾಕಿತು. ಇದಾದ ಬಳಿಕ ಪಿಚ್ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಲೀಲಾಜಾಲವಾಗಿ ರನ್ ಗಳಿಸಲಾರಂಭಿಸಿತು. ಕಳೆದೊಂದು ವರ್ಷದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಪ್ರತೀಕಾ ರಾವಲ್ ಕೇವಲ 23 ಇನ್ನಿಂಗ್ಸ್ಗಳನ್ನಾಡಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಒಂದು ಸಾವಿರ ರನ್ ಪೂರೈಸುವಲ್ಲಿ ಯಶಸ್ವಿಯಾದರು. ಈ ಮೂಲಕ ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾದ ಲಿಂಡ್ಸೆ ರೀಲರ್ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ಮಂಧನಾ 49 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ ಮಂಧನಾ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮೊರೆಹೋದರು. ಇದಾದ ಬಳಿಕ 88 ಎಸೆತಗಳನ್ನು ಎದುರಿಸಿ ಮಂಧನಾ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 14ನೇ ಶತಕ ಸಿಡಿಸಿ ಸಂಭ್ರಮಿಸಿದರು.
ಹಲವು ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧನಾ
ಈ ಶತಕದೊಂದಿಗೆ ಸ್ಮೃತಿ ಮಂಧನಾ, ಕಿವೀಸ್ನ ಸುಜಿ ಬೈಟ್ಸ್ ಹಿಂದಿಕ್ಕಿ ಗರಿಷ್ಠ ಶತಕ ಸಿಡಿಸಿದ ಮಹಿಳಾ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಮೆಗ್ಲ್ಯಾನಿಂಗ್ 15 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಸ್ಮೃತಿ ಮಂಧನಾ ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಸದ್ಯ ಮಂಧನಾ ಈ ಕ್ಯಾಲೆಂಡರ್ ವರ್ಷದಲ್ಲಿ 5 ಶತಕ ಸಿಡಿಸಿದ್ದಾರೆ. ತಂಜಿಮಿನ್ ಬ್ರಿಟ್ಸ್ ಕೂಡಾ ಕ್ಯಾಲೆಂಡರ್ ವರ್ಷದಲ್ಲಿ 5 ಶತಕ ಸಿಡಿಸಿದ್ದಾರೆ. ಅಂತಿಮವಾಗಿ ಮಂಧನಾ 95 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 109 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧನಾ 33.2 ಓವರ್ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್ಗೆ 212 ರನ್ಗಳ ಜತೆಯಾಟವಾಡಿತು. ಇದು ಮಹಿಳಾ ಏಕದಿನ ವಿಶ್ವಕಪಪ್ ಇತಿಹಾಸದಲ್ಲಿ ಭಾರತ ಪರ ಮೂಡಿ ಬಂದ ಗರಿಷ್ಠ ರನ್ ಜತೆಯಾಟ ಎನಿಸಿಕೊಂಡಿತು.
ಇನ್ನು 75 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದ ಪ್ರತೀಕಾ ರಾವಲ್ 122 ಎಸೆತಗಳನ್ನು ಎದುರಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದರು. ಡೆಲ್ಲಿ ಮೂಲದ ಪ್ರತೀಕಾ ರಾವಲ್ ಕೂಡಾ ಸ್ಪೋಟಕ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದ್ದಾರೆ. ಸದ್ಯ 40 ಓವರ್ ಅಂತ್ಯದ ವೇಳೆಗೆ ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡು 254 ರನ್ ಬಾರಿಸಿದ್ದು, ಇನ್ನುಳಿದ ಕೊನೆಯ 10 ಓವರ್ನಲ್ಲಿ ಎಷ್ಟು ರನ್ ಕಲೆಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


