ಏಷ್ಯಾಕಪ್ ಗೆದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ. ಏಷ್ಯಾಕಪ್ ಫೈನಲ್ ಸೇರಿದಂತೆ ಪ್ರಮುಖ ಫೈನಲ್‌ಗಳಲ್ಲಿ ಸತತವಾಗಿ ವಿಫಲರಾಗುತ್ತಿರುವ ಸೂರ್ಯ, ಈ ಟೂರ್ನಿಯಲ್ಲಿ ಕೇವಲ 72 ರನ್ ಗಳಿಸಿದ್ದಾರೆ.
ದುಬೈ: ಏಷ್ಯಾಕಪ್ ಗೆಲುವಿನ ನಡುವೆಯೂ ಭಾರತಕ್ಕೆ ಕ್ಯಾಪ್ಟನ್ ಸೂರ್ಯಕುಮಾರ್ ಅವರ ಫಾರ್ಮ್ ಚಿಂತೆಯಾಗಿದೆ. ಫೈನಲ್‌ನಲ್ಲಿ ಕೇವಲ ಒಂದು ರನ್‌ಗೆ ಔಟಾದ ಸೂರ್ಯ, ಟೂರ್ನಿಯಲ್ಲಿ ಒಟ್ಟು 72 ರನ್ ಗಳಿಸಲಷ್ಟೇ ಶಕ್ತರಾದರು. ಫೈನಲ್‌ನಲ್ಲಿ ಆಟ ಮರೆಯುವ ಚಾಳಿಯನ್ನು ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧವೂ ಮುಂದುವರಿಸಿದರು. ಪಾಕಿಸ್ತಾನದ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ನಾಯಕ ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರು. ಸೂರ್ಯ ಫೈನಲ್‌ನಲ್ಲಿ ವಿಫಲರಾಗುತ್ತಿರುವುದು ಇದೇ ಮೊದಲೇನಲ್ಲ. 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ರನ್‌ಗಳಿಗೆ ಔಟಾಗಿದ್ದರೆ, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 28 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿದ್ದರು.
ಐಪಿಎಲ್ ಫೈನಲ್‌ನಲ್ಲೂ ಸೂರ್ಯ ಫೇಲ್
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರನಾದ ಸೂರ್ಯ, ನಾಲ್ಕು ಐಪಿಎಲ್ ಫೈನಲ್‌ಗಳಲ್ಲೂ ನಿರೀಕ್ಷೆಯಂತೆ ರನ್ ಗಳಿಸಲು ವಿಫಲರಾಗಿದ್ದಾರೆ. ಫೈನಲ್‌ನಲ್ಲಿ ಅವರ ಗರಿಷ್ಠ ಸ್ಕೋರ್ 24 ರನ್. ಇಲ್ಲಿಯವರೆಗೆ ಆಡಿದ ಎಂಟು ಫೈನಲ್‌ಗಳಲ್ಲಿ ಸೂರ್ಯ ಗಳಿಸಿರುವುದು ಕೇವಲ 115 ರನ್. ಏಷ್ಯಾಕಪ್‌ನಲ್ಲೂ ಭಾರತದ ನಾಯಕನ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿತ್ತು. ಏಳು ಪಂದ್ಯಗಳಿಂದ ಕೇವಲ 72 ರನ್. ಪಾಕಿಸ್ತಾನದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಗಳಿಸಿದ ಅಜೇಯ 47 ರನ್ ಅವರ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ.
ಏಷ್ಯಾಕಪ್‌ನಲ್ಲಿ ಸಂಪೂರ್ಣ ನಿರಾಸೆ
ಸೂಪರ್ ಫೋರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶೂನ್ಯಕ್ಕೆ ಔಟಾದ ಸೂರ್ಯ, ಯುಎಇ ವಿರುದ್ಧ ಏಳು, ಬಾಂಗ್ಲಾದೇಶದ ವಿರುದ್ಧ ಐದು ಮತ್ತು ಶ್ರೀಲಂಕಾ ವಿರುದ್ಧ ಹನ್ನೆರಡು ರನ್‌ಗಳಿಗೆ ಔಟಾಗಿದ್ದರು. ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್, ಈ ವರ್ಷ 11 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 100 ರನ್. ಅವರ ಸರಾಸರಿ 11.11. ಪಾಕಿಸ್ತಾನದ ವಿರುದ್ಧವೂ ಸೂರ್ಯ ಅವರ ದಾಖಲೆ ನಿರಾಶಾದಾಯಕವಾಗಿದೆ. ಎಂಟು ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆಡಿದ 90 ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ನಾಲ್ಕು ಶತಕಗಳೊಂದಿಗೆ ಒಟ್ಟು 2,670 ರನ್ ಗಳಿಸಿದ್ದಾರೆ.
ಏಷ್ಯಾಕಪ್ ಫೈನಲ್ ನಂತರ ಕಳಪೆ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ, ತಾನು ಫಾರ್ಮ್ ಔಟ್ ಆಗಿಲ್ಲ ಎಂದು ಸೂರ್ಯ ಉತ್ತರಿಸಿದ್ದರು. 'ರನ್ ಗಳಿಸಲು ಸಾಧ್ಯವಾಗುತ್ತಿಲ್ಲ ಅಷ್ಟೇ, ನಾನು ಫಾರ್ಮ್ ಔಟ್ ಆಗಿಲ್ಲ. ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಮಾಡುವ ತರಬೇತಿ ಮತ್ತು ಸಿದ್ಧತೆಯಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಮೈದಾನಕ್ಕೆ ಇಳಿದಾಗ ಆಟೋ ಪೈಲಟ್ ಮೋಡ್‌ನಲ್ಲಿರುತ್ತೇನೆ' ಎಂದಿದ್ದರು. ಬ್ಯಾಟಿಂಗ್‌ನಲ್ಲಿ ಫಾರ್ಮ್ ಔಟ್ ಆಗಿದ್ದರೂ, ನಾಯಕನಾಗಿ ಉತ್ತಮ ದಾಖಲೆ ಹೊಂದಿರುವುದು ಸೂರ್ಯ ಅವರ ತಂಡದಲ್ಲಿನ ಸ್ಥಾನವನ್ನು ಸದ್ಯಕ್ಕೆ ಭದ್ರವಾಗಿಸಿದೆ. ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗಳನ್ನು ಗೆದ್ದ ಸೂರ್ಯಕುಮಾರ್, ಇದೀಗ ಏಷ್ಯಾಕಪ್‌ನಲ್ಲೂ ಭಾರತವನ್ನು ಚಾಂಪಿಯನ್ ಮಾಡಿದ್ದಾರೆ.


